ಬುಧವಾರ, ಮಾರ್ಚ್ 26, 2025

ತೇರು ತೇರಣ್ಣ ತೇರು ತೇರುತೇರು

 

ತೇರು ತೇರಣ್ಣ ತೇರು ತೇರುತೇರು

ತೇರು ತೇರಣ್ಣ ತೇರು ತೇರುತೇರು

ಬೆಟ್ಟಾದ ಬಯಲಾಗ ಏರುತೇರು ಸೇರುತೇರು

 

ಗರಿಗರಿ ಸೀರಿಯನುಟ್ಟು ಮಿರಿಮಿರಿ ಕುಪ್ಪಸ ತೊಟ್ಟು

ಹೊಳಪಿನ ಹಣಿ ನಡುವೆ ಕೆಂಪಾದ ಕುಂಕುಮ ಬೊಟ್ಟು

ನಮ್ಮವ್ವ ಚಾಮುಂಡಿ ಕುಂತಾಳ ಮೂಗುತಿ ತೊಟ್ಟು

ಭಲ್ಲೆಯನೆತ್ತುತ ದುಷ್ಟರ ನೋಡ್ಯಾಳ ಕೆಂಗಣ್ಣು ಬಿಟ್ಟು

 

ತೇರು ತೇರಣ್ಣ ತೇರು ತೇರುತೇರು

ಬೆಟ್ಟಾದ ಬಯಲಾಗ ಏರುತೇರು ಸೇರುತೇರು

 

ಮಾವಿನ ಎಲಿ ತನ್ನಿ ಹೂವಿನ ಮಾಲೆಯ ತನ್ನಿ ತೋರಣ ಒಟ್ಟಿ

ಹೊಸದಾಗಿ ಹೊಸೆದ ನಾರಿನ ಹಗ್ಗವ ಬಿಗಿಯುತ ತೇರಿಗೆ ಕಟ್ಟಿ

ಅಂಗನೆಯರೆಲ್ಲ ಇಟ್ಟಿಹರು ಬಣ್ಣದ ರಂಗೋಲಿ ತೇರನು ಮುಟ್ಟಿ

ಹಾರವ ಬಂದಾನ ಮಾರೋವ ತಂದಾನ ಮಲ್ಲೆ ಹೂವಿನ ಬುಟ್ಟಿ

 

ತೇರು ತೇರಣ್ಣ ತೇರು ತೇರುತೇರು

ಬೆಟ್ಟಾದ ಬಯಲಾಗ ಏರುತೇರು ಸೇರುತೇರು

 

ಹೊತ್ತಾನ ಮುರಾರಿ ತಾನಿಂದು ಕೂರ್ಮಾವತಾರವ ತೊಟ್ಟು  

ಹಿಡಿಯಿರಿ ಮಲ್ಲರೆ ಭಾರದ ಹಗ್ಗವ ನಿಮ್ಮ ಹೆಗಲ ಮೇಲೊಟ್ಟು

ಹತ್ತಾರು ಜನರ ನೂರಾರು ಕೈಗಳ ಭಕ್ತಿಯ ಶಕ್ತಿಯ ಒತ್ತೆಗೆ ಇಟ್ಟು  

ಮೈಯ್ಯ ಮೈಯ್ಯಿಗೆ ತಿಕ್ಕಿ ಎಳೆಯೋಣ ಜಾತಿ ಬೇಧಗಳ ಬದಿಗಿಟ್ಟು  

 

ತೇರು ತೇರಣ್ಣ ತೇರು ತೇರುತೇರು

ಬೆಟ್ಟಾದ ಬಯಲಾಗ ಏರುತೇರು ಸೇರುತೇರು

 

ಚಿಣ್ಣರಿಗುಂಟು ಬಣ್ಣದ ಬತ್ತಾಸು ಅಂದು ಅದು ಮೂರೇ ಕಾಸು

ದಣಿದು ಬಂದವರಿಗುಂಟು ಶುಂಠಿ ಬೆರೆತ ತಾಜಾ ಕಬ್ಬಿನ ಜೂಸು

ನಲ್ಲ ನಲ್ಲೆಯರಿಗುಂಟು ಹಸಿರಾಗಿ ಬೆಳೆದ ತಂಪಾದ ಹುಲ್ಲಿನ ಹಾಸು

ಮಾತೆಯರ ಮರೆತಿಲ್ಲ ನಮ್ಮವ್ವ ಇಟ್ಟಾಳೆ ಬಣ್ಣದ ಬಳೆಗಳ ಸೊಗಸು

 

ತೇರು ತೇರಣ್ಣ ತೇರು ತೇರುತೇರು

ಬೆಟ್ಟಾದ ಬಯಲಾಗ ಏರುತೇರು ಸೇರುತೇರು

 

ಕಡಲೇಪುರಿಯ ಕೊಂಡು ಇಂದು ಹತ್ತಾರು ಸೇರು

ಮರೆಯದೇ ತೇರಿಗೆ ಬಾಳೆಯ ಹಣ್ಣನು ತೂರು

ಒಲಿದು ಹರಸಾಳು ನಮ್ಮವ್ವ ಬಾಗುತ ಕೋರು

ತೇರಿಗೆ ನಮಿಸಿ ಮಾತೆಯ ಪೂಜಿಸಿ ಬಂದೋರು

 

ತೇರು ತೇರಣ್ಣ ತೇರು ತೇರುತೇರು

ಬೆಟ್ಟಾದ ಬಯಲಾಗ ಏರುತೇರು ಸೇರುತೇರು

 

ತೇರೆಂದರೆ ಅದು ತೇರಲ್ಲ ಮಾತೆಯ ಅಂಬಾರಿ

ಬರುವುದು ನೋಡಣ್ಣ ವರುಷಕೆ ಒಂದೇ ಸಾರಿ

ಬನ್ನಿ ಎಳೆಯೋಣ ನಾವು ನೀವೆಲ್ಲಾ ಒಟ್ಟಾಗಿ ಸೇರಿ

ಕಷ್ಟ ನಷ್ಟಗಳ ದುಃಖ ದುಮ್ಮಾನಗಳ ಗಾಳಿಗೆ ತೂರಿ

 

ತೇರು ತೇರಣ್ಣ ತೇರು ತೇರುತೇರು

ಬೆಟ್ಟಾದ ಬಯಲಾಗ ಏರುತೇರು ಸೇರುತೇರು

 

ರಚಕ: ಡಾ. ಪ್ರಭಾಕರ್ ಬೆಳವಾಡಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಚುಟುಕು ರಾಮಾಯಣ

  ಚುಟುಕು ರಾಮಾಯಣ ಕರ್ತೃ: ಡಾ. ಪ್ರಭಾಕರ್ ಬೆಳವಾಡಿ   ರಾಮನು ಹುಟ್ಟಿದ ಅಯೋಧ್ಯೆ ಧಾಮ ದಾಸರು ಹಾಡಲು ರಾಮ ನಾಮ ರಘುಪತಿ ರಾಘವ ರಾಜಾ ರಾಮ ಮಾಡುವ ಭಜನೆ ಜೈ ಸೀಯ...