ಮನೆಯಾಗೊಂದಜ್ಜಿ
ಕಾಲಾಗ ಕಾಲ್ಗೆಜ್ಜಿ
ಮಾಡ್ಯಾಳ ಕರಗಡಬು ಮೋದಕ
ನೋಡವ್ವ ಒಂದೇ ಹದಕ
ಪ್ಯಾಟಿಲಿಂದ ಹತ್ತಿಯಾ ತಂದಾಳ
ಬೆರಳಾಗ ಹೊಸದು ಇಟ್ಟಾಳ
ಇಪ್ಪತ್ತಾರೆಳೆಯ ಹತ್ತಿಯ ಹಾರ
ಗಣಪನಿಗದುವೆ ಅಲಂಕಾರ
ರತ್ನಾದ ಮಂಟಪದೊಳಗ
ಗಂಧದ ಪೀಠವನಿಟ್ಟು
ಬಾಳಿಯೆಲಿಯನಿಟ್ಟು ಅಕ್ಕಿಯ ಒಟ್ಟಾಳ
ಮನಿಗ ಬಂದಾನ ಗಣಪ ಇಂದು
ಭಾದ್ರಪದ ಚೌತಿಯೆಂದು
ಪೀತಾಂಬರ ಸೀರಿ ಉಟ್ಟು
ರೇಶಮಿ ರವಕಿ ತೊಟ್ಟು
ಮಲ್ಲಿಗಿ ಹೂವ ಮುಡದಾಳ
ಕೈ ಕಾಲ ತೊಳೆದು ನೀರನು ಕುಡಿಸಿ
ಮಂಟಪದ ಒಳಗೆ ಗಣಪನ ಕುಳ್ಳಿರಿಸಿ
ಹಣೆಗೆ ಕುಂಕುಮದ ಬೊಟ್ಟು
ಮೇಲೊಂದು ಹೂವನು ಇಟ್ಟು
ಶೋಢಶೋಪಚಾರ ಮಾಡೀರಿ
ವನಿತೆಯರೆಲ್ಲ ಆರತಿ ಎತ್ತೀರಿ
ಭಕ್ಷ್ಯ ಭೋಜ್ಯಗಳನಿಟ್ಟು
ಫಲ ತಾಂಬೂಲ, ನೈವೇದ್ಯ
ಸುವರ್ಣದಕ್ಷಿಣೆ ಮೇಲಿಟ್ಟು
ಕರಗಡಬು ಮೋದಕ ಜೋಡಿಸಿ
ಗರಿಗರಿ ಚಕ್ಕುಲಿಯ ಅರ್ಪಿಸಿ
ಭಕ್ತಿ ಭಾವದಿ ಇಪ್ಪತ್ತೊಂದು ಸಲ ನಮಿಸಿ
ವಿಘ್ನನಿವಾರಕ ವಿದ್ಯಾಪ್ರಧಾಯಕ
ಸಂಕಷ್ಟಹರಣ ಗಣನಾಯಕ
ಎನ್ನುತ ಗಣಪನ ಭಜಿಸಿ
ವಾಹನ ಮೂಷಕ ಆವನೀಗೂ ತಿನ್ನಿಸಿ
ಮತ್ತೆ ಬರುತಿರೆಂದು ಗಣಪನ ಕಳಿಸಿ
ಕುಣಿಯುತ್ತ ನಲಿಯುತ್ತ ಮನೆಯಜ್ಜಿ
ಕಾಯುತ ಕುಳಿತಿದ್ದ ಮಕ್ಕಳಿಗೆ
ಮೋದಕ ಚಕ್ಕುಲಿ ಕೊಟ್ಟಾಳ
ದೊಡ್ಡವರಾದಮೇಲೆ ಮಕ್ಕಳೇ
ಗಣಪನ ನೀವೂ ಪೂಜಿಸಿ ಎಂದಾಳ
ಮನೆಯಾಗೊಂದಜ್ಜಿ
ಕಾಲಾಗ ಕಾಲ್ಗೆಜ್ಜಿ
ರಾಗದಿ ಗಣಪನ ಹಾಡ ಹಾಡ್ಯಾಳ.
ರಚನೆ : ಡಾ. ಪ್ರಭಾಕರ್ ಬೆಳವಾಡಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ