ಶನಿವಾರ, ಮೇ 31, 2025

ಅಂಕಿ ಕಲಿಯೋಣ

 


 

ಅಂಕಿ ಕಲಿಯೋಣ

ಕರ್ತೃ: ಡಾ. ಪ್ರಭಾಕರ್ ಬೆಳವಾಡಿ

 

ಒಂದು, ಎರಡು, ಮೂರು

ಮನೆಗಿರಬೇಕು ಸೂರು

ನಾಲ್ಕು, ಐದು, ಆರು

ಹಿಂದೆ ಮುಂದೆ ಡೋರು

ಏಳು, ಎಂಟು, ಒಂಬತ್ತು

ಮೆಟ್ಟಲು ಏಣಿಸೆ ಹತ್ತು

 

ಗುರುವಾರ, ಮೇ 29, 2025

“ಮಗುವಿಗೆ ಜಯವು ಮಗುವೇ ಭವವು”

 

ಮಗುವಿಗೆ ಜಯವು ಮಗುವೇ ಭವವು

ಕರ್ತೃ: ಡಾ. ಪ್ರಭಾಕರ್ ಬೆಳವಾಡಿ

 

ತಾಯಿಯ ಒಲವು ತಂದೆಯ ಬಲವು

ಮಗುವಿನ ಗೆಲುವು ಚೆಲುವೋ ಚೆಲುವು

ಗುರುಗಳ ಪಾಠ ಸಜ್ಜನ ಕೂಟ

ಮಗುವಿನ ಆಟ ರಸಮಯ ದಿಟವು

ಸವಿಸವಿ ನುಡಿಯು ದೇವರ ಗುಡಿಯು

ಮಗುವಿನ ನಡೆಗೆ ನಂದನ ವನವು

ಅಣ್ಣನ ನಡತೆ ಅಕ್ಕನ ಮಮತೆ

ಮಗುವಿನ ಹೆಜ್ಜೆಗೆ ನಂದಾ ದೀಪವು

ಹಿರಿಯರ ಹಿಡಿತ ಗೆಳೆಯರ ಸೆಳೆತ  

ಬೆಳೆಯುವ ಮಗುವ ಆಶ್ರಯ ಸತತ

ಯಶವನು ಪಡೆಯೆ ಸುಂದರ ಪಟವು 

ಮೇಲಿನ ಮಾತು ಖಂಡಿತ ದಿಟವು

ಮಗುವಿಗೆ ಜಯವು ಮಗುವೇ ಭವವು

ಕೀರುತಿ ತರಲು ಆನಂದಮಯವು.

ಭಾನುವಾರ, ಮೇ 25, 2025

‘ಶಿವ ನಾಮದ ಫಲ’

 

 

‘ಶಿವ ನಾಮದ ಫಲ’

ಕರ್ತೃ: ಡಾ. ಪ್ರಭಾಕರ್ ಬೆಳವಾಡಿ  

 

‘ಓಂ ನಮಃ ಶಿವಾಯ’ ನಾಮವ ಬರೆದು

ಅಭಿಷೇಕ ಮಾಡಿ ನೊರೆ ಹಾಲನು ಕರೆದು

ನರರೆಲ್ಲಾ ನಲಿಯುತ್ತಾ ನಮಿಸಿರಿ ನೆರೆದು

ಪ್ರಸಾದ ನೀವಿತ್ತಿ ನೆರೆಹೊರೆಯರ ಕರೆದು

 

ಪೂಜಿಸಿ ನೀವಿಂದು ಮಾತ್ಸ್ಯರ್ಯ ತೊರೆದು

ನಮಿಸಿ ಅವಗಿಂದು ಏಕ ಬಿಲ್ವವನು ಎರೆದು

ಭಜಿಸಿ ನಾಮವನಿಂದು ಮದವನ್ನು ಜರಿದು

ಒಲಿಯುವನು ಕಾಮ ಕ್ರೋಧಗಳ ಹರಿದು

 

ದಹಿಸುವನು ಪಾಪಗಳ ಮುಕ್ಕಣ್ಣ ತೆರೆದು

ಪಾವನಗೊಳಿಸುವನು ಗಂಗೆಯನು ಸುರಿದು

ಶಿವ ನಾಮವ ಜಪಿಸಿರಿ ಭಕ್ತಿಯಲಿ ಮೆರೆದು

ಶಿವ ನಾಮದ ಫಲವು ಮತ್ತೆಲ್ಲೂ ಬರದು

ಸೋಮವಾರ, ಮೇ 19, 2025

'ಜಗಕೆಲ್ಲಾ ಅವನೇ ಹರಿತಾನೆ'

 

'ಜಗಕೆಲ್ಲಾ ಅವನೇ ಹರಿತಾನೆ'

ಕರ್ತೃ: ಡಾ. ಪ್ರಭಾಕರ್ ಬೆಳವಾಡಿ

 

ಜಗದಲ್ಲೂ ನೀನೇ ಜಗವೆಲ್ಲಾ ನೀನೇ

ನಮ್ಮಲ್ಲೂ ನೀನೇ ಎಲ್ಲೆಲ್ಲೂ ನೀನೇ

ಜಡದಲ್ಲೂ ನೀನೇ ಗಿಡದಲ್ಲೂ ನೀನೇ

ಬುಡವೆಲ್ಲಾ ನೀನೇ ಜಗದಗಲ ನೀನೇ II 1 II

 

ಸಕಲಕೆಲ್ಲವೂ ನೀನೇ ಅಕಳಂಕಕೂ ನೀನೇ

ಹರಿಯೂ ನೀನೇ ಹರಿಯುತಿಹೆ ನೀನೇ

ವಿಶ್ವರೂಪನೂ ನೀನೇ ವಿಶ್ವಭೂಪನೂ ನೀನೇ

ನುಡಿಯಲ್ಲೂ ನೀನೇ ನನ್ನ ಧ್ವನಿಯಲ್ಲೂ ನೀನೇ II 2 II

 

ದಿಕ್ಕೆಲ್ಲಾ ನೀನೇ ದಿಸೆಯೆಲ್ಲಾ ನೀನೇ

ಭುವಿ ಚರಣ ನೀನೇ ಬಾನ ಮುಕುಟ ನೀನೇ

ಕೃತಿಯೂ ನೀನೇ ಸ್ತುತಿಯೂ ನೀನೇ

ಕಣ ಕಣವೂ ನೀನೇ ಋಣ ಋಣವೂ ನೀನೇ II 3 II

 

ತಗುಲೆ ನಿನ್ನ ಚರಣ ಪಡೆವೆ ಅಂತಃಕರಣ

ಮಾಡೆ ನಿನ್ನ ನಮನ ಧುರಿತವೆಲ್ಲಾ ಶಮನ

ನಿತ್ಯ ನಿನ್ನ ಸ್ಮರಣೆ ಹರಿದು ತಂತು ಕರುಣೆ

ನಿನ್ನ ಕಾಯ ಆಹಾ ಎಂತಾ ಮಾಯ II 4 II

 

ಹರಿಯೇ ನಿನ್ನ ನಾಮ ಆನಂದಧಾಮ

ಹರಿಯೇ ನಿನ್ನ ಧ್ಯಾನ ಸೌಂದರ್ಯಪಾನ

ಹರಿಯ ಕೇಳಿ ನಡೆದೆ ಒಳಿತನೆಲ್ಲ ಪಡೆದೆ

ಹರಿಯೆ ಪರಂಧಾಮ ನೀಲಮೇಘಶ್ಯಾಮ II 5 II

 

ಹರಿಯೆ ಸೂತ್ರದಾರ ಹರಿಯೆ ಜಗದೋದ್ಧಾರ

ಪ್ರಭಾಕರ ಶರ್ಮನು ಮಾಡಿಹ ಹರಿ ಓಂಕಾರ

ಹರಿಗೆ ನಮಿಸುತ ಹರಿಯ ಸ್ತುತಿಸುತ ಆಗಿ ಉದ್ಧಾರ

ಜಗವೆಲ್ಲಾ ಅವನೇ ಜಗಕೆಲ್ಲಾ ಅವನೇ ಹರಿತಾನೆ II 6 II

 

 

 

 

ಶನಿವಾರ, ಮೇ 17, 2025

'ಕೇರು ಕೇರವ್ವ ತಾಯಿ ಕೇರು ಕೇರು'

 


'ಕೇರು ಕೇರವ್ವ ತಾಯಿ ಕೇರು ಕೇರು'

ಕರ್ತೃ ಡಾ. ಪ್ರಭಾಕರ್ ಬೆಳವಾಡಿ

 

ಕೇರು ಕೇರವ್ವ ತಾಯಿ ಕೇರು ಕೇರು

ಬತ್ತಾದ ಹೊಟ್ಟನ್ನ ತೂರು ತೂರು

 

ಬಿದರೀನ ಮೊರವನೆತ್ತಿ ಕೇರು ಕೇರು

ಮೇದಾರ ಹೆಣೆದಾನ ಕೇರು ಕೇರು

 

ಚಿಂದಿ ಬಟ್ಟೆಯ ತಂದು ಮಡಕೇಲಿ ಅದ ಸುಟ್ಟು

ಅದಕ ಹದವಾಗಿ ಎಣ್ಣೆಯ ಬಿಟ್ಟು ರುಬ್ಬಿ ಇಟ್ಟು

 

ರುಬ್ಬೀದ ಹಿಟ್ಟ ಮೆತ್ತಿ ರಂದ್ರಗಳನೆಲ್ಲಾ ಮುಚ್ಚಿ

ಸಿಬಿರು ಬೆರಳೀಗ ಚುಚ್ಚದಂಗ ಹದ ಮಾಡ್ಯಾನ

 

ಮನಿ ಅಂಗಳದಾಗ ಮಾರಾಕ ಇಟ್ಟಾನ

ಬಂದಾ ಹಣವೇ ಅವನ ಜೀವಕ್ಕೆ ತಂಪೇನ

 

ಯಜಮಾನ ಬೆಳೆದಾನ ಬೆವರಲ್ಲಿ ಬತ್ತಾನ

ಹೊಟ್ಟಾನು ಬಿಡಿಸಿ ಅಕ್ಕಿಯ ತೆಗಿಲೇನ

 

ಹಾಡ ಹಾಡುತ ಮೊರದಾಗ ಹಾಕಿ ಕೇರೋಣ

ಬೀಳುವ ಕಾಳ ಆದು, ಹಾರುವ ಜೊಳ್ಳನೂದು

 

ತಳವನ್ನು ಮುಟ್ಟಿ ಬೆರಳಲ್ಲಿ ಕುಟ್ಟಿ ಮುಂದೆ ಊದು

ಬೇಡದ್ದು ಮುಂದೆ, ಬೇಕಾದ್ದು ಹಿಂದೆ ಉಳಿಯೋದು

 

ಎರಡೂ ಕೈಯಾಗ ಹಿಡಿದು ಅತ್ತಿತ್ತ ಅಲ್ಲಾಡ್ಸುತ್ತ

ಬೆರಳನ್ನು ಆಡಿಸುತ್ತಾ ಊದುತ್ತಾ ಹೆಕ್ಕಿನೋಡು

Let The Earth Breathe

  [ Folk Tune Adaptation] [“Let the Earth Breathe”] [Dr Belavadi Prabhakar] [Refrain (Chorus)] Let the earth breathe, let the earth ...