ಮಂಗಳವಾರ, ಮೇ 13, 2025

'ಬರುವವರಿದ್ದರು ರಾಯರು ಮನೆಗೆ'

 

'ಬರುವವರಿದ್ದರು ರಾಯರು ಮನೆಗೆ'

ಕರ್ತೃ: ಡಾ. ಪ್ರಭಾಕರ್ ಬೆಳವಾಡಿ

(ಅಂದಿನ ಕವಿ ಶ್ರೀ. ಕೆ. ಎಸ್. ನರಸಿಂಹಸ್ವಾಮಿಯವರ ಕ್ಷಮೆ ಕೋರಿ)

 

ಬರುವವರಿದ್ದರು ರಾಯರು ಮನೆಗೆ ಏಕೋ ಮುಂದಕೆ ಹೋಗಿತ್ತು

ಅತ್ತೆ ಮಾವಗೆ ತಿಳಿಯಾದಾಗಿತ್ತು

 

ಮಾವನು ತಂದ ಮಲ್ಲಿಗಿ ಹೂವು ಪೊಟ್ಟಣದೊಳಗೆ ನಲುಗಿ ಮಲಗಿತ್ತು

ರಾಯರ ಕಾಯುತ ನಂದಿತ್ತು

 

ಅತ್ತೆಯು ಹಾಕಿದ ದೋಸೆಯ ಹುದುಗು ಗುದುಗುದು ಸಪ್ಪಳ ಮಾಡಿತ್ತು

ಬೆಳ್ಳಗೆ ತೊಳೆದ ಕಾವಲಿ ಕಪ್ಪಗೆ ಆಗಿತ್ತು

 

ಹುಣ್ಣಿಮೆ ಚಂದಿರ ಬಾನಲಿ ಮೂಡುವ ಮೊದಲೇ ಮೋಡ ಕವಿದಿತ್ತು

ಹೌದು ಕಾರ್ಮೋಡ ಕವಿದಿತ್ತು

 

ಮಾವನ ತೋಟದ ಅಳದು ತಂದ ಎಳನೀರು ಬಿಸಿಯಾಗಿ ಬಿಟ್ಟಿತ್ತು

ಮಚ್ಚು ಮೂಲೆಗೆ ವರಗಿತ್ತು

 

ಮಾಲಿಗೆ ಹೋಗಿ ಓಡುತ ತಂದ ದ್ರಾಕ್ಷಿ ಗೋಡಂಬಿ ಮರಳಿ ತವರನು ಸೇರಿತ್ತು

ಮಾವನ ಹೆಜ್ಜೆಯೇ ಕಳಚಿತ್ತು

 

ಯೇಲ ಲವಂಗ ಡಬ್ಬಿಯಲೇ ಇತ್ತು ಸುಣ್ಣವು ಮಾತ್ರ ಪಾಪ ಒಣಗಿ ಹೋಗಿತ್ತು

ಚಿಗುರೆಲೆ ಹಸಿಬಟ್ಟೆಯ ಒಳಗಿತ್ತು

ಮಡಿ ಮಡಿ ಎನ್ನುವ ತಾಯಿಯ ಸಿಡಿಮಿಡಿ ಪದುಮಗೆ ದಾರಿ ತೋರಿತ್ತು

ಬೇರೆ ಮಾರ್ಗವು ಎಲ್ಲಿತ್ತು

ಆಕೆಯ ವ್ಯಾನಿಟಿ ಬ್ಯಾಗಿನ ಒಳಗಿನ ರಹಸ್ಯ ಮುಸಿ ಮುಸಿ ನಗುತಿತ್ತು

ರಾಯರ ಗಮನಕೆ ಬಂದಿತ್ತು

ಬರುವವರಿದ್ದರು ರಾಯರು ಮನೆಗೆ ಏಕೋ ಮುಂದಕೆ ಹೋಗಿತ್ತು

ಅತ್ತೆ ಮಾವಗೆ ತಿಳಿಯಾದಾಗಿತ್ತು

ನಾಲಕ್ಕು ದಿನವದು ಕಳೆದಿತ್ತು ಮಗಳ ಎಂದಿನ ಮಾತೇ ನಿಂತಿತ್ತು

ಮೌನಕೆ ಜಾರಿತ್ತು

ಐದನೇ ದಿನದಲಿ ಪದುಮಳ ಕಪ್ಪು ಕೂದಲನು ಟವಲ್ ಮುಚ್ಚಿತ್ತು

ಮುಖದಲಿ ಕಮಲವು ಅರಳಿತ್ತು

ತಣ್ಣಗೆ ಗಾಳಿ ಬೀಸಿತ್ತು ತಿಂಡಿಯ ಸಮಯವು ಆಗಿತ್ತು ಮಲ್ಲಿಗೆ ಅರಳಿತ್ತು

ರಾಯರ ಸವಾರಿ ಬಂದಿತ್ತು

ಅತ್ತೆ ಮಾವರಿಗೆ ಅಚ್ಚರಿ ಕಾದಿತ್ತು ಮುಂದಿನ ಹೆಜ್ಜೆ ತಿಳಿಯಾದಾಗಿತ್ತು

ಕಾರಣ ಈಗ ತಿಳಿದಿತ್ತು

 

ಇಂದಿನ ದಿನವೇ ಹೀಗಿತ್ತು

ಅಂದಿನ ದಿನವೇ ಬೇರಿತ್ತು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

"Leveraging Diversity: A Practical Approach to Public Holidays in Multicultural Societies".

  "Leveraging Diversity: A Practical Approach to Public Holidays in Multicultural Societies" .   India , like many multicultur...