ಗುರುವಾರ, ಮೇ 8, 2025

ನನ್ನಮ್ಮ ಶಾರದೆ, ಉಮಾಮಹೇಶ್ವರಿ....

 


ನನ್ನಮ್ಮ ಶಾರದೆ, ಉಮಾಮಹೇಶ್ವರಿ....

ಅಗಣಿತ ವಾತ್ಸಲ್ಯದ ಗಣಿಯೂ ಹೌದು..

ಕರ್ತೃ: ಡಾ. ಪ್ರಭಾಕರ್ ಬೆಳವಾಡಿ

 

ನನ್ನಮ್ಮ ಶಾರದಮ್ಮ ಅಂತಿಂತ ಅಮ್ಮನಲ್ಲ. ಅವಳ ಕರುಳು ಮಮತೆಯ ಕಣಜ. ಪ್ರೀತಿ ವಾತ್ಸಲ್ಯಗಳ ಖನಿಜ. ಹಾಗೆಂದು ಏಕಮಯಿಯಿರಲಿಲ್ಲ. ಒಳ್ಳೆಯತನವನ್ನು ಕಲಿಸಿ ದಾರಿ ತಪ್ಪಿದಾಗೆಲ್ಲಾ ಒದ್ದು ಬುದ್ಧಿವಂತನನ್ನಾಗಿ ಮಾಡಿದ ದ್ವೈತ ಸಿದ್ಧಾಂತಿ. ಅಂದು ಅಲ್ಯೂಮೀನಿಯಂ ತಟ್ಟೆಯಲ್ಲಿ ಅನ್ನಕ್ಕೆ ಮೆಣಸಿನಪುಡಿ ಮತ್ತು ತೆಂಗಿನಕಾಯಿ ತುರಿ ಬೆರೆಸಿ ಉಣಿಸಲು ಪ್ರಾರಂಭಿಸಿ ಇಂದು ನಾನು ಬೆಳ್ಳಿಯ ತಟ್ಟೆಯಲ್ಲಿ ಣುವಂತೆ ಮಾಡಿದ್ದು ನಮ್ಮಮ್ಮನ ತಕ್ಕಡಿ. "ಕೆಡುಕಿಗೆ ಶಿಕ್ಷೆ ಒಳಿತಿಗೆ ರಕ್ಷೆ" ಎಂಬ ಸಾರ ತುಂಬಿದ ಸಾಧ್ವಿ ನನ್ನಮ್ಮ.

ಹಣಕಾಸಿನ ವ್ಯವಹಾರ ಅವಳ ಬಳುವಳಿ. ನನಗೆ ಅನಿವಾರ್ಯ ಆದಾಗ ಧನಸಹಾಯ ಮಾಡುತ್ತಿದ್ದ ಅಮ್ಮ ಅದನ್ನು ಸಾಲದ ರೂಪದಲ್ಲಿ ಬಡ್ಡಿ ಆಧಾರದ ಮೇಲೆ ಕೊಟ್ಟು, ಪ್ರತಿ ತಿಂಗಳು ಕಂತಿನ ಮೇಲೆ ಕಡ್ಡಾಯವಾಗಿ ಪಡೆಯುತ್ತಿದ್ದಳು. ಆದರೆ ಅದೇ ದುಡ್ಡನ್ನು ಕೂಡಿಟ್ಟು. ಮತ್ತೆ ನನಗೆ ಬೇಕಾದಾಗ ಕೊಡುತ್ತಿದ್ದಳು. ಅವಳ ಮುಖ್ಯ ಧ್ಯೇಯ ನನಗೆ ಶಿಸ್ತು, ರೀತಿ, ನೀತಿ ಕಲಿಸುವುದಾಗಿತ್ತು. ಅದರಲ್ಲಿ ಜೀವನದ ಪಾಠ ತುಂಬಿತ್ತು.

ಸಮಯ ಪ್ರಜ್ಞೆ ಕಲಿಸಿದವಳೂ ನನ್ನಮ್ಮನೇ. ಆಕೆಗೆ ಸಿನೆಮಾ ನೋಡುವುದೆಂದರೆ ಅಚ್ಚು ಮೆಚ್ಚು. 3 ಗಂಟೆಗೆ ಮ್ಯಾಟಿನೀ ಶೋ ಎಂದರೆ, ಮಧ್ಯಾನ್ಹ 2 ಗಂಟೆಗೆ ರೆಡಿ ಆಗಿ ಬಿಡುತ್ತಿದ್ದಳು. ಅದೂ ಗರಿ ಗರಿ ಸೀರೆ ಉಟ್ಟು, ಚಿಕನ್ ರವಿಕೆ ತೊಟ್ಟು  ಜೊತೆಗೆ ಶುಭ್ರವಾದ ನ್ಯಾಪಿಕಿನ್ ಸೀರೆಗೆ ಸೆಕ್ಕಿಸಿಕೊಳ್ಳುತ್ತಿದ್ದ ಅಚ್ಚುಕಟ್ಟುತನ ನನ್ನ ಕಣ್ಣಲ್ಲಿ ಇಂದೂ ಇಳಿದಿದೆ. ಶಿಸ್ತು ಚೊಕ್ಕಟತನದ ರಕ್ತ ನನ್ನಲ್ಲಿ ಹರಿಸಿದವಳು ನನ್ನಮ್ಮ.

ಅಮ್ಮ ಎಂದರೆ ಕೇವಲ ಪ್ರೀತಿ, ಮಮತೆ, ವಾತ್ಸಲ್ಯ ಅಲ್ಲ. "ಅಮ್ಮ ಎಂದರೆ ಏನೋ ಸ್ವರ್ಗವು" ಎಂದು ಕೇವಲ ಕವನಗಳಲ್ಲಿ ಬರೆದು ಹಾಡಿದರೆ ನಿಜವಾದ ಅಮ್ಮನಿಗೆ ದ್ರೋಹ ಬಗೆದಂತೆ. ಸ್ವರ್ಗ ಮತ್ತು ನರಕಗಳ ದೃಶ್ಯವನ್ನು ನಮಗೆ ತೋರಿಸಿ ಮುಂದಿನ ಜೀವನಕ್ಕೆ ಹದ ಮಾಡುವವಳೇ ಅಮ್ಮ. ನೆನಪಿರಲಿ, ಅತಿಯಾದ ಪ್ರೀತಿ ಆತಂಕಕ್ಕೆ ಮೂಲ. ಆಕೆ ಅಮರಶಿಲ್ಪಿ ಜಕಣಾಚಾರಿಯ ತರಹ. ಮಕ್ಕಳನ್ನು ಶಿಲೆಯಂತೆ ಪರಿಗಣಿಸಿ ಸೌಂದರ್ಯ ತುಂಬುವವಳೇ ನಿಜವಾದ ಅಮ್ಮ. ಆಕೆ ಮಕ್ಕಳಿಗೆ ದಾರಿದೀಪವಾಗಬೇಕು. ನನ್ನಮ್ಮನ ತರಹ. ಬೆಣ್ಣೆ ತಿನ್ನಿಸುವಾಗ ತಿನ್ನಿಸಿ, ದೊಣ್ಣೆ ಎತ್ತುವಾಗ ಎತ್ತುವವಳೇ ನಿಜವಾದ ಅಮ್ಮ. ಬದುಕಿನ ಬೇವುಬೆಲ್ಲಗಳ ಸತ್ವವನ್ನು ತಿಳಿಸಿಕೊಡುವ ಶಿಕ್ಷಕಿ, ರಕ್ಷಕಿ. ಕ್ಷಮಿಸಿ, ಹಿರಿಯನಾಗಿ ನೈಜತೆಯನ್ನು ಓದುಗರ ಮುಂದೆ ಇಡುತ್ತಿದ್ದೇನೆ.

ಇಂದೂ ಸಹ ಪ್ರತಿಯೊಂದು ತುತ್ತು ಬಾಯಿಗೆ ಇಡುವಾಗ ಅಪ್ಪ ಅಮ್ಮನನ್ನು ನೆನೆಸಿಕೊಳ್ಳುತ್ತೇನೆ.

ಅಂತಿಂತ ಅಮ್ಮ ಅವಳಲ್ಲ

ಅವಳಂತ ಅಮ್ಮ ಇರಲಿ ಜಗಕೆಲ್ಲ

ಏನಂತೀರಿ ನೀವೆಲ್ಲಾ ?

🙏🙏🙏

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Let The Earth Breathe

  [ Folk Tune Adaptation] [“Let the Earth Breathe”] [Dr Belavadi Prabhakar] [Refrain (Chorus)] Let the earth breathe, let the earth ...