ಧರ್ಮವೆಂದು ದುಡಿ ಕರ್ಮದಂತೆ ಪಡಿ
ಕುರುಡು ತಾಯಿ ದುಡಿಯುತ ನಿಂತಳಂತೆ
ಅದು ಯಾಕೆ ಅಂತೆ?
ಮಕ್ಕಳ ಮೇಲಿನ ಮಮತೆಯಂತೆ
ಹೊಕ್ಕಳ ಬಳ್ಳಿಯ ಕರುಣೆಯಂತೆ
ಮಕ್ಕಳ ಬೆಳೆಸಿ ನೋಡುವ ಚಿಂತೆ
ಮಕ್ಕಳೇ ಮನೆಯ ಮಾಣಿಕ್ಯವಂತೆ
ರಟ್ಟೆಯ ಬಿಗಿದು ಒಗೆದಾಳಂತೆ
ಬಟ್ಟೆಯ ಮಡಿಸಿ ಒಟ್ಟಿದಳಂತೆ
ತುತ್ತನು ಕೊಟ್ಟು ಮುತ್ತಿಟ್ಟಳಂತೆ
ಹುತ್ತಕೆ ಹಾಲನು ಎರೆದಾಳಂತೆ
ಮಕ್ಕಳ ಓದಿಸಿ ಬೆಳೆಸಿದಳಂತೆ
ಹೊಕ್ಕಳ ಬಳ್ಳಿ ಕಡಿದಾವಂತೆ
ಅರಸುತ ಕೆಲಸ ಹಾರಿದರಂತೆ
ಹರಸುತ ತಾಯಿ ನಿಂತಿಹಳಂತೆ
ದಿನಗಳೇ ಕಳೆದು ಹೋದುವಂತೆ
ಮನದಲೇ ತಾಯಿ ಕೊರಗಿದಳಂತೆ
ದೂರದ ಕುಡಿಗಳ ಕಾಣುವುದೆಂತೆ
ಬಾರದ ನುಡಿಗಳ ಕೇಳುವುದೆಂತೆ
ದುಡಿದ ಕೈಗಳು ಸೋತಿರುವಂತೆ
ಬಾಡಿದ ಬೆನ್ನದು ಬಾಗಿಹುದಂತೆ
ನೆರೆದ ಕೂದಲು ಉದುರಿದೆಯಂತೆ
ಮರೆತ ಮಕ್ಕಳ ಯೋಚನೆಯಂತೆ
ಧನಿಕ ಮಕ್ಕಳು ಮೆರೆದಿಹರಂತೆ
ಕನಿಕರವನ್ನೇ ತಾ ಮರೆತಿಹರಂತೆ
ಶಿವನ ಧ್ಯಾನವ ಮಾಡಿದಳಂತೆ
ಹವನ ಹೋಮವ ನಡೆಸಿದಳಂತೆ
ಹರಸಿ ಮಕ್ಕಳ ಅಸು ನೀಗಿದಳಂತೆ
ಬರದ ಮಕ್ಕಳ ಕರೆಯುವುದೆಂತೆ
ನೆರೆಹೊರೆಯವರೇ ಎತ್ತಿದರಂತೆ
ಬರೆದಿಹ ಪ್ರಭಾಕರ ಕವಿತೆಯಂತೆ
ಎಲ್ಲರ ಮನೆಯ ವ್ಯಥೆ ಇದುವಂತೆ
ಬಲ್ಲವರೆಲ್ಲಾ ಹೇಳುವ ಮಾತಿನಂತೆ
ದುಡಿವುದೇ ನಮ್ಮ ಧರ್ಮವಂತೆ
ಪಡೆಯುವೆದೆಲ್ಲ ಆ ಕರ್ಮದಂತೆ
ರಚನೆ : ಡಾ. ಪ್ರಭಾಕರ್ ಬೆಳವಾಡಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ