ಭಾನುವಾರ, ಏಪ್ರಿಲ್ 6, 2025

ದಾಸರ ಸಂತತಿ ನೋಡಲ್ಲಿ

 


ದಾಸರ ಸಂತತಿ ನೋಡಲ್ಲಿ

ಕರ್ತೃ: ಡಾ. ಪ್ರಭಾಕರ್ ಬೆಳವಾಡಿ

 

ದಾಸರಿವರೊ ದಾಸರ ದಾಸರಿವರೊ

ವಿಠ್ಠಲ ಕಳಿಸಿಹ ರಾಮಧೂತರಿವರೊ II

 

ತಂಬೂರಿ ಮೀಟುತ ಪದಗಳ ಹಾಡುತ ಸಾರುವ ದಾಸರ ನೋಡಲ್ಲಿ

ಭಕ್ತಿ ವೈರಾಗ್ಯಗಳ ಮರ್ಮವ ತಿಳಿಸುವ ನುಡಿಗಳ ತುಂಬಿಸಿ ಅದರಲ್ಲಿ

ಫಲವನು ಬಯಸದೆ ಜೀವನ ಪಥವ ತೋರುವ ದಾಸರ ನೋಡಲ್ಲಿ

ಸಾಗುವ ದಾಸರ ನೋಡಲ್ಲಿ II

ಲೋಕದಲೇನೆ ನಡೆಯುತಲಿರಲಿ ತನ್ನ ಸೇವೆಯ ಮಾಡುತ ನಡೆಯುತ

ಬರವೇ ಬೀಳಲಿ ಅಬ್ಬರವಾಗಲಿ ಕೀರ್ತನೆ ಹಾಡುತ ಧೈರ್ಯವ ತುಂಬುತ

ಹಾರಲಿ ಪೀಠ ರಾಜರ ಮುಕುಟ ಅಳುಕದೆ ಜನರಿಗೆ ಪರಿಮಾರ್ಗವ ತೋರುತ

ಸಾಗುವ ದಾಸರ ನೋಡಲ್ಲಿ II

ಭವ ಸಂಸಾರದ ಆಗುಹೋಗುಗಳ ಅರಿತೆಚ್ಚರ ಗಂಟೆಯ ಬಾರಿಸುತ

ನಿತ್ಯದ ಮಿತ್ಯದ ಸತ್ವವ ತೋರಿ ಧರ್ಮ ಕರ್ಮಗಳ ಸೋಸಿ ತೋರಿಸುತ

ಕಾಸನು ಪಡೆಯದೆ ಹೆಸರನು ಗಳಿಸದೆ ವಿಠ್ಠಲ ನೀಡುವ ಪ್ರಸಾದ ಸವಿಯುತ

ಸಾಗುವ ದಾಸರ ನೋಡಲ್ಲಿ II

ಸಾರುವ ದಾಸರ ನೋಡಲ್ಲಿ II

ಸಾಗುವ ದಾಸರ ನೋಡಲ್ಲಿ II

ಶುಕ್ರವಾರ, ಏಪ್ರಿಲ್ 4, 2025

ಸೀತಾ ಸ್ವಯಂವರ


 


ಸೀತಾ ಸ್ವಯಂವರ

ಕರ್ತೃ: ಡಾ. ಪ್ರಭಾಕರ್ ಬೆಳವಾಡಿ


ಶಿವ ಧನುಸ್ಸನು ಎತ್ತಿದ ರಾಮ

ಅಲ್ಲವೇ ಅವನು ಕೋದಂಡರಾಮ

ಶಿರವನು ಬಾಗಿಸಿ, ಧನುಸ್ಸಿಗೆ ನಮಿಸಿ

ಹಾರವೆಂದೇ ತಿಳಿಯುತ ಎತ್ತಿದ ರಾಮ

ಧನುಸ್ಸನು ಬಾಗಿಸಿ ಹುರಿಯನು ಕಟ್ಟಲು

'ಝಣ್' ಎಂದು ಮುರಿಯಿತೇ ಆರಾಮ

ಸೀತೆಯ ಕೊರಳಿಗೆ ಹಾರವ ಹಾಕುತ

ಜನಕನ ತನುಜೆಯ ವರಿಸಿದ ರಾಮ

ಅಗಣಿತ ಗುಣಗಳ ಜಯಘನಶ್ಯಾಮ

ವಿಶ್ವಾಮಿತ್ರನ ಬಹುಪ್ರಿಯ ರಾಮ

ಕೌಶಲ್ಯಾ ಸುತ ಗಣಪ್ರಿಯ ರಾಮ

ಸೀತಾ ಸ್ವಯಂವರ ಜಯಿಸಿದ ರಾಮ

ಜಯ ಜಯ ರಾಮ, ಜಯ ಶ್ರೀರಾಮ

ಪ್ರಭಾಕರ ವಂದಿಪ ಕೋದಂಡರಾಮ

ಸೀತಾವಲ್ಲಭ ಚಂದನ ರಾಮ

ಶ್ರೀಗಂಧ ಲೇಪಿತ ರಾಜಾರಾಮ

ಗುರುವಾರ, ಏಪ್ರಿಲ್ 3, 2025

ಚುಟುಕು ರಾಮಾಯಣ

 


ಚುಟುಕು ರಾಮಾಯಣ

ಕರ್ತೃ: ಡಾ. ಪ್ರಭಾಕರ್ ಬೆಳವಾಡಿ  

ರಾಮನು ಹುಟ್ಟಿದ ಅಯೋಧ್ಯೆ ಧಾಮ

ದಾಸರು ಹಾಡಲು ರಾಮ ನಾಮ

ರಘುಪತಿ ರಾಘವ ರಾಜಾ ರಾಮ

ಮಾಡುವ ಭಜನೆ ಜೈ ಸೀಯಾರಾಮ

 

ಉಳುತಲು ಇರಲು ಸಿಕ್ಕಳು ಸೀತೆ

ಜನಕ ರಾಜನ ಪರಮ ಪುನೀತೆ  

ಶಿವ ಧನುಸ್ಸನು ಮುರಿಯುವ ಗಾತೆ

ಮುರಿದು ರಾಮನು ವರಿಸಿದ ಸೀತೆ

 

ದಶರಥ ರಾಜಗೆ ಅಂಟಿದ ಶಾಪ

ಪಟ್ಟವ ಏರದೇ ರಾಮನು ಪಾಪ

ಉಳಿಸಿದ ತಂದೆಯು ಕೊಟ್ಟ ಮಾತು

ಕೈಕೇಯಿಗೆ ಕೊಟ್ಟ ಅಂದಿನ ಮಾತು

 

ಹೊರಟನು ರಾಮ ನಾರನು ತೊಟ್ಟು

ಭರತಗೆ ತನ್ನ ಪಾದುಕೆ ಕೊಟ್ಟು

ಸೀತೆ ಲಕ್ಷ್ಮಣ ಜೊತೆಯಲಿ ಬರಲು

ದಶರಥ ಸತ್ತನು ತಾಳದೆ ಅಳಲು

 

‘ರಾಮಾ ರಾಮಾ’ ಕೇಳುತ ಧ್ವನಿಯ

ಸೀತೆಯು ಹೆದರಿ ದಾಟಲು ಗೆರೆಯ

ಮಾರು ವೇಷದಿ ಸೀತೆಯ ಹಿಡಿದು

ಹಾರಿದ ರಾವಣ ಪುಷ್ಪಕ ಪಿಡಿದು   

 

ಕುರುಹನು ನೀಡಿ ನಮನವ ಮಾಡಿ

ಪ್ರಾಣವ ಬಿಟ್ಟಿತು ಪಕ್ಷಯು ನೋಡಿ  

ಅರಸುತ ಹೊರಟನು ಮುಂದಕೆ ರಾಮ  

ವಾಲಿಯ ಕಾರಣ ಸಿಕ್ಕನು ಹನುಮ

 

ಅಡ್ಡ ಬರಲು ಕಡಲದು ನಡುವೆ

ಹನುಮ ನೆಗೆದನು ರಾಮನ ನೆನೆದು

ಅತ್ತಳು ಸೀತೆ ಪಡೆಯಲು ಒಡವೆ

ಲಂಕೆಯ ಸುಟ್ಟನು ಹನುಮ ಜಿಗಿದು   

ಅಶೋಕ ವನದಲಿ ಇದ್ದಳು ಸೀತೆ

 

 ದಾಟುವ ಬಗೆಯ ತಿಳಿಯದೇ ರಾಮ

ಹನುಮಗೆ ಕೇಳಿದ ಏನಿದೆ ಆಯಾಮ

ಜಿಗಿದನು ಹನುಮ ಅನ್ನುತ ಜೈಶ್ರೀರಾಮ

ಲಂಕೆಯ ವನದಲಿ ಕೇಳಿದ ರಾಮನಾಮ

 

ಅಶೋಕ ವನದಲಿ ಇದ್ದಳು ಸೀತೆ

ಪಡೆದಳು ರಾಮನ ಉಂಗುರ ಮಾತೆ

ಲಂಕೆಯ ಸುಟ್ಟ ಹನುಮನ ಗಾತೆ  

 

ವಾನರ ಸೇನೆ ಕಟ್ಟಿತು ಸೇತುವೆ

ಅಳಿಲೂ ಮಾಡಲು ತಮ್ಮಯ ಸೇವೆ  

 

ರಾವಣ ದರ್ಪವ ಮುರಿದನು ರಾಮ

ರಾಮನ ಸಂಗಡ ಇದ್ದನು ಹನುಮ

ರಾಮನು ಮುಗಿಸಿದ ತಾ ವನವಾಸ

ಬರೆದನು ಪ್ರಭಾಕರ ಆ / ರಾಮನ ಇತಿಹಾಸ

ದಾಸರ ಸಂತತಿ ನೋಡಲ್ಲಿ

  ದಾಸರ ಸಂತತಿ ನೋಡಲ್ಲಿ ಕರ್ತೃ: ಡಾ. ಪ್ರಭಾಕರ್ ಬೆಳವಾಡಿ   ದಾಸರಿವರೊ ದಾಸರ ದಾಸರಿವರೊ ವಿಠ್ಠಲ ಕಳಿಸಿಹ ರಾಮಧೂತರಿವರೊ II   ತಂಬೂರಿ ಮೀಟುತ ಪದಗಳ ಹಾಡುತ...