ಎಷ್ಟು ಧನ್ಯರೋ, ಎನಿತು ಮಾನ್ಯರೋ
ಅಷ್ಟಮಿ ದಿನದಂದು, ಅಷ್ಟಮನ ಪುಟ್ಟಿಸಲು
ವಿಶ್ವವನೇ ಒಳಗಿಟ್ಟು, ವಿಶ್ವವನೇ ಹೊರಬಿಟ್ಟ
ದೇವಕಿ ಎಷ್ಟು ಧನ್ಯಳೋ, ಎನಿತು ಮಾನ್ಯಳೋ II
ಹುಟ್ಟಿದ್ದ ಬಚ್ಚಿಟ್ಟು , ಗುಟ್ಟನು ಮಾಡದೇ ರಟ್ಟು
ಬಾಂಧವ್ಯ ಬದಿಗಿಟ್ಟು, ಬುಟ್ಟಿಯಲ್ಲಿ ತೇಲ್ಬಿಟ್ಟ
ಆ ದೇವಕಿ ಎಷ್ಟು ಧನ್ಯಳೋ, ಎನಿತು ಮಾನ್ಯಳೋ II
ಸೊಂಟದಲಿ ಎತ್ತಿಟ್ಟು , ತುತ್ತು ಅನ್ನವನಿಟ್ಟು
ಬಾಲನ ಲೀಲೆಗಳ ತನ್ನ ಕಣ್ಣಲಿ
ತುಂಬಿಟ್ಟ
ಯಶೋಧ ಮಾತೆ ಎಷ್ಟು ಧನ್ಯಳೋ, ಎನಿತು ಮಾನ್ಯಳೋ II
ಆರಿಗುಂಟು ಆರಿಗಿಲ್ಲ ದೀನ ಸುಧಾಮನ
ನಂಟು
ಪರಮಾತ್ಮನ ಅನುಗ್ರಹ ಪಂಚ ಪಾಂಡವರಿಗುಂಟು
ಇವರೆಷ್ಟು ಧನ್ಯರೋ ಮನುಜ, ಇವರೆನಿತು ಮಾನ್ಯರೋ II
ಯುದ್ಧ ಭೂಮಿಗೆ ಮೆಟ್ಟಿ, ಶಸ್ತ್ರಾಸ್ತ ಬದಿಗಿಟ್ಟು
'ಗೀತೋಪದೇಶದ', ವಿರಾಟ ರೂಪದದೃಷ್ಟ
ಪಡೆದ ಪಾರ್ಥನೆಷ್ಟು ಧನ್ಯನೋ, ಎನಿತು ಮಾನ್ಯನೋ II
ಭಕ್ತಿಯ ಬದಿಗಿಟ್ಟು, ಅಂಗಾಂಗ ಬಗ್ಗಿಸಿ, ಪಾದಕ್ಕೆ
ತಾಗಿಸಿ
ಕಾಮ ಕ್ರೋಧಗಳ ಅನವರತ ನೀ ಬಿಡದೇ
ಪಾಲಿಸೆ
ನೀ ಎಷ್ಟು ಧನ್ಯನೋ ಮನುಜ, ನೀ ಎನಿತು ಮಾನ್ಯನೋ II
ಮಾತೆಯರ ಅನುಕರಿಸು, ಪಾಂಡುರಂಗನ ಭಜಿಸು
ಪ್ರಭಾಕರ ಶರ್ಮನ ಈ ಮಾತ ನೀ
ನಿತ್ಯವೂ ನೆನೆಸು
ಆಗಲೇ ನೋಡಯ್ಯ ಆಗುವೆ ಧನ್ಯನು, ನೀನೂ ಮಾನ್ಯನು II
ರಚನೆ: ಡಾ. ಪ್ರಭಾಕರ್ ಬೆಳವಾಡಿ