ಗುರುವಾರ, ಮಾರ್ಚ್ 20, 2025

ದೋಸೆಯ ಕಥೆ-ವ್ಯಥೆ

 

ದೋಸೆಯ ಕಥೆ-ವ್ಯಥೆ

Man eating dosa Stock Videos & Footage - HD and 4K Video Clips - Alamy

ತುಂಡು ಪಂಚೆಯ ಪಾಕಪ್ರವೀಣರೆ

ನೀವೇನು ಅಡಿಗೆ ಮಾಡಿದಿರಿ

ದೋಸೆಯ ಬಿಡುವ ಕಾವಲಿ ಮೇಲೆ

ಬೆವರಿನ ಹನಿಯ ಚೆಲ್ಲಿದಿರಿ

 

ಸೌಟನು ಹಿಡಿದು ಹಿಟ್ಟನು ಹರಡಿ

ತುಪ್ಪವ ಸವರಿ ತಿರುವಿದಿರಿ

ಆಲೂ ಪಲ್ಯವ ಒಳಗಡೆ ದೂಡಿ 

ಮಡಿಸುತ ನೀವು ನೀಡಿದಿರಿ

 

ಗರಿ ಗರಿ ದೋಸೆ ಬಾಯಲಿ ಸೇರಲು 

ಇನ್ನೂ ತಿನ್ನುವ ಆಸೆಯು ಆಗಲು  

ಒಂದರ ಮೇಲೆ ಒಂದನು ತಿನ್ನಲು

ಬಿಲ್ಲನು ಕೊಟ್ಟಿರಿ ಬಲುಭಾರಿ

 

ಹೋದೆವು ನಾವು ಹೌಹಾರಿ

ಹೋದೆವು ನಾವು ಹೌಹಾರಿ

ರಚಕ: ಡಾ. ಪ್ರಭಾಕರ್ ಬೆಳವಾಡಿ

ಸೋಮವಾರ, ಮಾರ್ಚ್ 10, 2025

ಧರ್ಮವೆಂದು ದುಡಿ ಕರ್ಮದಂತೆ ಪಡಿ

 ಧರ್ಮವೆಂದು ದುಡಿ ಕರ್ಮದಂತೆ ಪಡಿ


ಕುರುಡು ತಾಯಿ ದುಡಿಯುತ ನಿಂತಳಂತೆ
ಅದು ಯಾಕೆ ಅಂತೆ?

ಮಕ್ಕಳ ಮೇಲಿನ ಮಮತೆಯಂತೆ
ಹೊಕ್ಕಳ ಬಳ್ಳಿಯ ಕರುಣೆಯಂತೆ

ಮಕ್ಕಳ ಬೆಳೆಸಿ ನೋಡುವ ಚಿಂತೆ
ಮಕ್ಕಳೇ ಮನೆಯ ಮಾಣಿಕ್ಯವಂತೆ

ರಟ್ಟೆಯ ಬಿಗಿದು ಒಗೆದಾಳಂತೆ
ಬಟ್ಟೆಯ ಮಡಿಸಿ ಒಟ್ಟಿದಳಂತೆ

ತುತ್ತನು ಕೊಟ್ಟು ಮುತ್ತಿಟ್ಟಳಂತೆ
ಹುತ್ತಕೆ ಹಾಲನು ಎರೆದಾಳಂತೆ

ಮಕ್ಕಳ ಓದಿಸಿ ಬೆಳೆಸಿದಳಂತೆ

ಹೊಕ್ಕಳ ಬಳ್ಳಿ ಕಡಿದಾವಂತೆ

ಅರಸುತ ಕೆಲಸ ಹಾರಿದರಂತೆ
ಹರಸುತ ತಾಯಿ ನಿಂತಿಹಳಂತೆ

ದಿನಗಳೇ ಕಳೆದು ಹೋದುವಂತೆ
ಮನದಲೇ ತಾಯಿ ಕೊರಗಿದಳಂತೆ


ದೂರದ ಕುಡಿಗಳ ಕಾಣುವುದೆಂತೆ
ಬಾರದ ನುಡಿಗಳ ಕೇಳುವುದೆಂತೆ

ದುಡಿದ ಕೈಗಳು ಸೋತಿರುವಂತೆ
ಬಾಡಿದ ಬೆನ್ನದು ಬಾಗಿಹುದಂತೆ

ನೆರೆದ ಕೂದಲು ಉದುರಿದೆಯಂತೆ

ಮರೆತ ಮಕ್ಕಳ ಯೋಚನೆಯಂತೆ

ಧನಿಕ ಮಕ್ಕಳು ಮೆರೆದಿಹರಂತೆ
ಕನಿಕರವನ್ನೇ ತಾ ಮರೆತಿಹರಂತೆ

ಶಿವನ ಧ್ಯಾನವ ಮಾಡಿದಳಂತೆ
ಹವನ ಹೋಮವ ನಡೆಸಿದಳಂತೆ

ಹರಸಿ ಮಕ್ಕಳ ಅಸು ನೀಗಿದಳಂತೆ
ಬರದ ಮಕ್ಕಳ ಕರೆಯುವುದೆಂತೆ

ನೆರೆಹೊರೆಯವರೇ ಎತ್ತಿದರಂತೆ
ಬರೆದಿಹ ಪ್ರಭಾಕರ ಕವಿತೆಯಂತೆ

ಎಲ್ಲರ ಮನೆಯ ವ್ಯಥೆ ಇದುವಂತೆ
ಬಲ್ಲವರೆಲ್ಲಾ ಹೇಳುವ ಮಾತಿನಂತೆ

ದುಡಿವುದೇ ನಮ್ಮ ಧರ್ಮವಂತೆ
ಪಡೆಯುವೆದೆಲ್ಲ ಆ ಕರ್ಮದಂತೆ

ರಚನೆ : ಡಾ. ಪ್ರಭಾಕರ್ ಬೆಳವಾಡಿ


ಶನಿವಾರ, ಮಾರ್ಚ್ 8, 2025

ಹೋಳಿ ಹುಣ್ಣಿಮೆ ನೋಟ

 

ಹೋಳಿ ನೋಟ

ರಚನೆ: ಡಾ. ಪ್ರಭಾಕರ್ ಬೆಳವಾಡಿ

ಹೋಳಿ ಹುಣ್ಣಿಮೆ ಹಬ್ಬ ಬಂದಿದೆ

ಗೋಪಿ ಬಳಗವು ಬಣ್ಣ ತಂದಿದೆ

ಪಿಚಕಾರಿ ಒತ್ತುತಾ ರಂಗನು ಸಿಡಿಸಿ ನಲಿದಾರೆ

ಕೃಷ್ಣನು ಬಂದ ರಾಧೆಯನು ತಂದ

ಬೃಂದಾವನಕಿಂದು ಕಳೆತಂದ

ಬಣ್ಣಗಳ ಹಚ್ಚುತ ಹಾಡನು ಹಾಡುತ ಕುಣಿಬಾರೆ

 

ಭುಜಗಳನೇರಿ ಗೋಪುರ ಮಾಡಿ

ಗಡಿಗೆಯ ಧೀರ ಒಡೆದದ್ದ ನೋಡಿ

ಕುಣಿ ಕುಣಿದು ಕೇಕೆಯ ಹಾಕುತ್ತಾ ಕೂಗೀರೆ

ಮಥುರಾ ನಗರದ ಆಟವ ನೋಡಲ್ಲಿ

ವನಿತೆಯರೆಲ್ಲರು ಕೋಲನು ಹಿಡಿದಲ್ಲಿ

ನಗುನಗುತ ಜಿಗಿಜಿಗಿದು ಪುರುಷರ ಬೆನ್ನೇ ಹತ್ಯಾರೆ

 

ಕಾಮನ ಶಿವನು ಸುಟ್ಟಂತೆ

ರಾಮನ ಬಾಣಕೆ ರಾವಣ ಸತ್ತಂತೆ

ಲಬೋ ಲಬೋ ಎನ್ನುತ ಜನ ಕುಣಿದ್ಯಾರೆ

ಹಸಿರು ಬಣ್ಣವ ತನ್ನಿ ಕೆಂಪು ಬಣ್ಣವ ತನ್ನಿ

ರಾಧೆ ಶ್ಯಾಮನಿಗೆ ನೀಲಿಯ ತನ್ನಿ

ಕಾದ ಹಂಡೆಯ ಬಿಸಿ ನೀರಲಿ ಸ್ನಾನವ ಮಾಡೋಣ ಬನ್ನೀರೆ

ಶುಕ್ರವಾರ, ಮಾರ್ಚ್ 7, 2025

ಕನ್ನಡ ವರ್ಣಾಕ್ಷರದಲ್ಲಿ ರಾಮನಾಮ

 


ಕನ್ನಡ ವರ್ಣಾಕ್ಷರದಲ್ಲಿ ರಾಮನಾಮ

ರಘುಪತಿ ರಾಘವ ರಾಜರಾಮ 

ಪತೀತ ಪಾವನ ಸೀತಾರಾಮ 


ಅಗಣಿತ ಗುಣಗಳ ಶ್ರೀರಾಮ

ಆತ್ಮ ರಕ್ಷಕ ಶ್ರೀರಾಮ

ಇಷ್ಟ ಪ್ರದಾಯಕ ಶ್ರೀರಾಮ

ಈರ್ಷೆ ನಿವಾರಕ ಶ್ರೀರಾಮ

ಉದಾತ್ತ ಮನದ ಶ್ರೀರಾಮ

ಊರಿನ ಪ್ರೇಮವೇ ಶ್ರೀರಾಮ

ಋಷಿಗಣ ವಂದಿತ ಶ್ರೀರಾಮ

ಎಲ್ಲರೂ ಪೂಜಿಪ ಶ್ರೀರಾಮ

ಏನು ಧನ್ಯನೋ ಶ್ರೀರಾಮ

ಐಸಿರಿ ಗುಣಘನ ಶ್ರೀರಾಮ 

ಒಳಿತನೇ ಮಾಡುವ ಶ್ರೀರಾಮ

ಓಡಿಪ ಭಯವ ಶ್ರೀರಾಮ

ಔದಾರ್ಯ ಮೂರ್ತಿ ಶ್ರೀರಾಮ

ಅಂತರಾತ್ಮನೇ ಶ್ರೀರಾಮ

ಅಃ ಎಂತಹ ಕರುಣಿ ಶ್ರೀರಾಮ

ನೀತಿಪಾಲಕ ಶ್ರೀರಾಮ

ಗರ್ವ ನಿವಾರಕ ಶ್ರೀರಾಮ

ಘನತೆಯ ಮೂಲವೇ ಶ್ರೀರಾಮ

ಙನಾಮೃತ ನೀನೇ ಶ್ರೀರಾಮ

ಚಲುವಾಂತ ಚಲುವ ಶ್ರೀರಾಮ

ಛತ್ರಪತಿಯೇ ಶ್ರೀರಾಮ

ಜನಕನ ಅಳಿಯ ಶ್ರೀರಾಮ

ಝಗಮಗಿಸುವನು ಶ್ರೀರಾಮ

ಞಕಾರ ಮೂರುತಿ ಶ್ರೀರಾಮ

ಟೊಂಕವ ಕಟ್ಟಿದ ಶ್ರೀರಾಮ

ಠೀವಲಿ ನಡೆವ ಶ್ರೀರಾಮ

ಡೊಂಕನು ತಿದ್ದುವ ಶ್ರೀರಾಮ

ಢಕ್ಕೆಯ ನುಡಿಸುವೆ ಶ್ರೀರಾಮ

(ಋ)ಣ ವಿಮೋಚಕ ಶ್ರೀರಾಮ

ತೇಜಸ್ವರೂಪ ಶ್ರೀರಾಮ

ಥಟ್ಟನೆ ಬರುವನು ಶ್ರೀರಾಮ

ದಯಾಮಯಿಯು ಶ್ರೀರಾಮ

ಧನುಸ್ಸುದಾರಿ ಶ್ರೀರಾಮ

ನಮಿಪೆವೋ ನಿನಗೆ ಶ್ರೀರಾಮ

ಪರಮ ಪವಿತ್ರ ಶ್ರೀರಾಮ

ಫಲವನು ನೀಡುವ ಶ್ರೀರಾಮ

ಬನದೊಳು ಅಲೆದ ಶ್ರೀರಾಮ

ಭರತನ ಅನುಜ ಶ್ರೀರಾಮ

ಮರ್ಯಾದ ಪುರುಷ ಶ್ರೀರಾಮ

ಯಜ್ಞರಕ್ಷಕ ಶ್ರೀರಾಮ

ರಾವಣಮರ್ಧನ ಶ್ರೀರಾಮ

ಲಕ್ಷ್ಮಣ ಅನುಜ ಶ್ರೀರಾಮ

ವಾನರ ಪ್ರಿಯಘನ ಶ್ರೀರಾಮ

ಶಬರಿಯು ಮೆಚ್ಚಿದ ಶ್ರೀರಾಮ

ಸೀತಾವಲ್ಲಭ ಶ್ರೀರಾಮ

ಹನುಮನ ಹೃದಯದಿ ಶ್ರೀರಾಮ

(ಅ)ಳತೆಗೂ ಮೀರಿದ ಶ್ರೀರಾಮ

ಕ್ಷೇತ್ರಪಾಲಕ ಶ್ರೀರಾಮ

ಜಯ ಜಯ ರಾಮ

ಜಯಹೇ ಶ್ರೀರಾಮ

ಪ್ರಭಾಕರ ಶರ್ಮನ ವರ್ಣಾಕ್ಷರ ರಾಮನಾಮ

ಓದಿರಿ ನಿತ್ಯ ಈ ದಿವ್ಯನಾಮ, ಕೇಳಿರಿ ಈ ಪಾವನನಾಮ

ರಾಮನ ನಾಮವೇ ಪುಣ್ಯ ಧಾಮ, ಹರಸುವ ನಿತ್ಯ ಆ ಸೋಮ.  

ಗುರುವಾರ, ಮಾರ್ಚ್ 6, 2025

ಶಿವ ಪಂಚಕಂ

 

ಶಿವ ಪಂಚಕಂ

ರಚನೆ : ಡಾ. ಪ್ರಭಾಕರ್ ಬೆಳವಾಡಿ

ಸ್ಫುಟಂ ಸ್ಫಟಿಕ-ಸಪ್ರಭಂ ಸ್ಫುಟಿತ-ಹಾಟಕ-ಶ್ರೀ-ಜಟಂ
ಶಶಾಂಕ-ದಲ-ಶೇಖರಂ ಕಪಿಲ-ಫುಲ್ಲ-ನೇತ್ರ-ತ್ರಯಮ್ II II
ತರಕ್ಷು-ವರ-ಕೃತ್ತಿಮದ್ ಭುಜಗ-ಭೂಷಣಂ ಭೂತಿಮತ್
ಕದಾ ನು ಶಿತಿ-ಕಂಠ ತೇ ವಪುರವೇಕ್ಷತೇ ವೀಕ್ಷಣಮ್ II ಅ ಪ II

ಬ್ರಹ್ಮ ಮುರಾರಿ ಸುವರ್ಜಿತ ಮೋಹಂ

ಕಶ್ಮಲ ದೂಷಿತ ಸ್ವಾರ್ಜಿತ ಮೋಹಂ

ಜನುಮಕೆ ಕಂಟಕ ಕಾರಕ ಮೋಹಂ

ತತ್ ಕ್ಷಣವೇ ತೊರೆಯಿರಿ ಮೋಹಂ II 1 II

 

ಅಧಿಕ ಆಸ್ತಿಯ ಗಳಿಸುವ ದಾಹಂ

ಅಧಿಕಾರದ ಮದ ಏರಿಪ ದಾಹಂ

ಅಧಿನಾಯಕನ ಜರಿಯುವ ದಾಹಂ

ಸರ್ವನಾಶದೆಡೆ ಮುನ್ನುಡಿ ದಾಹಂ II 2 II

 

ಸುಂದರ ವದನ ಪಡೆಯುವ ಮೋಹಂ

ಅಂದ ಭಕ್ತಿಯನು ತೋರುವ ದ್ರೋಹಂ

ಚಂದದ ತರುಣಿಯ ಭೋಗಿಪ ಮೋಹಂ

ಜನುಮ ವಿನಾಶಕೆ ತೋರಣ ಸತ್ಯಂ II 3 II

 

ರಾವಣ ನಾಶಕೆ ಕಾರಣ ದಾಹಂ

ಕಂಸ ವರ್ಧನಕೆ ಸಕಾರಣ ದರ್ಪಂ

ಶಿವನ ಮುನಿಸಿಗೆ ಮೂಲವೇ ಕಾಮಂ

ಮೋಹಂ ದಾಹಂ ಸುನಿಶ್ಚಿತ ದುಃಖಂ II 4 II

 

ಸತ್ಸಂಗ ಸದ್ಭಕ್ತಿಗೆ ಒಲಿಯುವ ದೇವಂ

ಸತ್ಯ ಸದ್ಬುದ್ಧಿಗೆ ನಲಿಯುವ ದೇವಂ

ಸತ್ಕರ್ಮ ಸಚ್ಚರಿತ್ರೆವಿರೆ ಗೆಲಿಸುವ ದೇವಂ

ತತ್ಪ್ರಣಮಾಮಿ ಆ ಶಿವ ಮಹಾದೇವಂ II 5 II

 

ಪ್ರಭಾಕರ ಶರ್ಮ ವಿರಚಿತ ಪಂಚಕಮಿದಂ ವೇದ್ಯಂ

ಶಿವಲೋಕಮವಾಪ್ನೋತಿ ಶಿವೇನ ಸಹ ಸನ್ನಿಧಿಂ II ಮಂ II

ಬುಧವಾರ, ಮಾರ್ಚ್ 5, 2025

ಗುರುರಾಯರು

 ಗುರುರಾಯರ ಆಗಮನ

ರಚನೆ: ಡಾ. ಪ್ರಭಾಕರ್ ಬೆಳವಾಡಿ


ಗುರುರಾಯರ ಹುಟ್ಟು

ಗೊತ್ತೇನೆ ಗುಟ್ಟು

ಅದು ಭಕ್ತರಿಗಾಗಿ ಬಂದ

ಪುದುವಟ್ಟು II


ಇಂದಿನಾ ದಿನವೂ ಪವಿತ್ರ

ಹುಟ್ಟಿದ್ದು ಇಂದೇ ಚಾರಿತ್ರ

ದೇವರೇ ಕಳಿಸ್ಯಾನಾ ನಮ್ಹತ್ರ

ಬರಲೆಂದು ನಮಗೆ ಸಚ್ಚಾರಿತ್ರ II


ಅನುರಕ್ತನಿಗೆ ಅಭಿವ್ಯಕ್ತ

ಅಶಕ್ತನ ಮಾಡುವ ಶಕ್ತ

ಅಕ್ಷತೆ ಪಡೆಯಲು ಭಕ್ತ

ದೋಷದಿಂದಲಿ ಮುಕ್ತ II


ಭ್ಯಂಜನ ಮಾಡಿ

ರಾಯರಿದ್ದಲ್ಲಿ ನಡಿ

ಮಡಿ ಸೀರೆಯನುಟ್ಟು

ಟ್ಟು ಹಣೆಯಾಗ ಬೊಟ್ಟು II


ಮನದಲ್ಲೇ ಹುಟ್ಯಾನ

ಮನದಾಗೆ ನಿಂತಾನ

ಮನವೇ ಅವನ ಸ್ಥಾನ

ಇಂದಿನ ದಿನವೇ ಸುದಿನ II


ನಮಗಾಗೆ ಬಂದಾನ

ಹರಸಾಲು ಬಂದಾನ

ಮಾಡಿರೆ ಅವನದೇ ಧ್ಯಾನ

ಹಾಡುತ ನೀವಿಂದು ಗುಣಗಾನ II


ಶನಿವಾರ, ಮಾರ್ಚ್ 1, 2025

ಗಣಪನ ಮೇಲೊಂದು ಅಜ್ಜಿಯ ಹಾಡು

 


ಮನೆಯಾಗೊಂದಜ್ಜಿ
ಕಾಲಾಗ ಕಾಲ್ಗೆಜ್ಜಿ
ಮಾಡ್ಯಾಳ ಕರಗಡಬು ಮೋದಕ
ನೋಡವ್ವ ಒಂದೇ ಹದಕ

ಪ್ಯಾಟಿಲಿಂದ ಹತ್ತಿಯಾ ತಂದಾಳ
ಬೆರಳಾಗ ಹೊಸದು ಇಟ್ಟಾಳ
ಇಪ್ಪತ್ತಾರೆಳೆಯ ಹತ್ತಿಯ ಹಾರ
ಗಣಪನಿಗದುವೆ ಅಲಂಕಾರ

ರತ್ನಾದ ಮಂಟಪದೊಳಗ 

ಗಂಧದ ಪೀಠವನಿಟ್ಟು

ಬಾಳಿಯೆಲಿಯನಿಟ್ಟು ಅಕ್ಕಿಯ ಒಟ್ಟಾಳ
ಮನಿಗ ಬಂದಾನ ಗಣಪ ಇಂದು
ಭಾದ್ರಪದ ಚೌತಿಯೆಂದು

ಪೀತಾಂಬರ ಸೀರಿ ಉಟ್ಟು

ರೇಶಮಿ ರವಕಿ ತೊಟ್ಟು

ಮಲ್ಲಿಗಿ ಹೂವ ಮುಡದಾಳ

ಕೈ ಕಾಲ ತೊಳೆದು ನೀರನು ಕುಡಿಸಿ
ಮಂಟಪದ ಒಳಗೆ ಗಣಪನ ಕುಳ್ಳಿರಿಸಿ

ಹಣೆಗೆ ಕುಂಕುಮದ ಬೊಟ್ಟು
ಮೇಲೊಂದು ಹೂವನು ಇಟ್ಟು
ಶೋಢಶೋಪಚಾರ ಮಾಡೀರಿ
ವನಿತೆಯರೆಲ್ಲ ಆರತಿ ಎತ್ತೀರಿ

ಭಕ್ಷ್ಯ ಭೋಜ್ಯಗಳನಿಟ್ಟು

ಫಲ ತಾಂಬೂಲ, ನೈವೇದ್ಯ

ಸುವರ್ಣದಕ್ಷಿಣೆ ಮೇಲಿಟ್ಟು
ಕರಗಡಬು ಮೋದಕ ಜೋಡಿಸಿ

ಗರಿಗರಿ ಚಕ್ಕುಲಿಯ ಅರ್ಪಿಸಿ
ಭಕ್ತಿ ಭಾವದಿ ಇಪ್ಪತ್ತೊಂದು ಸಲ ನಮಿಸಿ
ವಿಘ್ನನಿವಾರಕ ವಿದ್ಯಾಪ್ರಧಾಯಕ

ಸಂಕಷ್ಟಹರಣ ಗಣನಾಯಕ
ಎನ್ನುತ ಗಣಪನ ಭಜಿಸಿ
ವಾಹನ ಮೂಷಕ ಆವನೀಗೂ ತಿನ್ನಿಸಿ
ಮತ್ತೆ ಬರುತಿರೆಂದು ಗಣಪನ ಕಳಿಸಿ

ಕುಣಿಯುತ್ತ ನಲಿಯುತ್ತ ಮನೆಯಜ್ಜಿ
ಕಾಯುತ ಕುಳಿತಿದ್ದ ಮಕ್ಕಳಿಗೆ

ಮೋದಕ ಚಕ್ಕುಲಿ ಕೊಟ್ಟಾಳ
ದೊಡ್ಡವರಾದಮೇಲೆ ಮಕ್ಕಳೇ

ಗಣಪನ ನೀವೂ ಪೂಜಿಸಿ ಎಂದಾಳ

 

ಮನೆಯಾಗೊಂದಜ್ಜಿ
ಕಾಲಾಗ ಕಾಲ್ಗೆಜ್ಜಿ

ರಾಗದಿ ಗಣಪನ ಹಾಡ ಹಾಡ್ಯಾಳ.

ರಚನೆ : ಡಾ. ಪ್ರಭಾಕರ್ ಬೆಳವಾಡಿ 

Let The Earth Breathe

  [ Folk Tune Adaptation] [“Let the Earth Breathe”] [Dr Belavadi Prabhakar] [Refrain (Chorus)] Let the earth breathe, let the earth ...