ಗುರುವಾರ, ಫೆಬ್ರವರಿ 20, 2025

ಶಿವ ಶಿವ ಎಂದರೆ..

 


ಶಿವ ಶಿವ ಎಂದರೆ..

ರಚನೆ: ಡಾ. ಪ್ರಭಾಕರ್ ಬೆಳವಾಡಿ


II  ಶಿವ ಶಿವ ಎಂದರೆ ಜಗವೆಲ್ಲಾ
ಜಗಮಗ ನೋಡು ಜನರೆಲ್ಲಾ
ಶಿವನೇ ಕಾಯುವ ನಮಗೆಲ್ಲಾ   II

ನಿರತ ಧ್ಯಾನವ ಮಾಡುತಿರು
ನಮ್ಮವರೆಲ್ಲರೂ ಅನ್ನುತಿರು
ಅನ್ಯರು ಅವರು ಅನ್ನದಿರು
ನಿರತ ಸಾಧನೆ ಮಾಡುತಿರು
ಸಾಧನೆಗೈದರೂ ಮೆರೆಯದಿರು
ಸಹಪಾಠಿಗಳನೂ ಸಲಹುತಿರು

II  ಶಿವ ಶಿವ ಎಂದರೆ ಜಗವೆಲ್ಲಾ
ಜಗಮಗ ನೋಡು ಜನರೆಲ್ಲಾ
ಶಿವನೇ ಕಾಯುವ ನಮಗೆಲ್ಲಾ II
 
ಲೋಭಿಯಾಗಿ ಇರಲೂಬೇಡ
ರೋಗಿಯಾಗಿ ಬಳಲಲೂ ಬೇಡ
ಕಲಿಯುತ ಕಲೆಯುತ ಇದ್ದುಬಿಡು
ಕಲಿಸುತ ನಲಿಯುತ ಗೆದ್ದುಬಿಡು
ಶಿವನ ಸೇವೆಯ ಮಾಡುತಿರು
ಕೈಲಾಸಕೆ ದಾರಿಯು ಅನ್ನುತಿರು

II  ಶಿವ ಶಿವ ಎಂದರೆ ಜಗವೆಲ್ಲಾ
ಜಗಮಗ ನೋಡು ಜನರೆಲ್ಲಾ
ಶಿವನೇ ಕಾಯುವ ನಮಗೆಲ್ಲಾ II

ಅನಾಚಾರದಿ ದೂರವಿರು
ಅಪಕಾರವ ನೀ ಮಾಡದಿರು
ಅನ್ಯರ ನೀನು ದೂರದಿರು
ಅಸಹ್ಯ ಮಾತನು ಸಾರದಿರು
ಶಿವನ ಭಜನೆ ಮಾಡುತಿರು
ಶಿವನೇ ಜಗವು ಎನ್ನುತಿರು

II  ಶಿವ ಶಿವ ಎಂದರೆ ಜಗವೆಲ್ಲಾ
ಜಗಮಗ ನೋಡು ಜನರೆಲ್ಲಾ
ಶಿವನೇ ಕಾಯುವ ನಮಗೆಲ್ಲಾ II

ಮೃತ್ಯುಂಜಯನೇ ಶಿವನು
ಸರ್ಪಭೂಷಣ ಶಿವನು
ಗಂಗೆಯ ಹೊತ್ತಿಹ ಶಿವನು
ತ್ರಿಶೂಲಧಾರಿ ಶಿವನು
ಮಹಾದೇವನೇ ಶಿವನು
ಶಂಭೋ ಶಂಕರ ಶಿವನು

II  ಶಿವ ಶಿವ ಎಂದರೆ ಜಗವೆಲ್ಲಾ
ಜಗಮಗ ನೋಡು ಜನರೆಲ್ಲಾ
ಶಿವನೇ ಕಾಯುವ ನಮಗೆಲ್ಲಾ II

ಬುಧವಾರ, ಫೆಬ್ರವರಿ 19, 2025

ರಾಮನ ಕಂಡೀರಾ

 


ರಾಮನ ಕಂಡೀರಾ ನೀವು ರಾಮನ ಕಂಡೀರಾ

ದಶರಥ ನಂದನ ರಾಮನ ಕಂಡೀರಾ

ಬಾಲರಾಮ ಕೋದಂಡರಾಮ

ಹನುಮನ ಹೃದಯದಿ ನೆಲಸಿಹ ರಾಮ

ತಂದೆಯ ಮಾತನು ಕೇಳಿದ ರಾಮ

ಕಾಡಲಿ ನೆಲಸಲು ಹೋದವ ರಾಮ

ವಿಶ್ವಾಮಿತ್ರ ಹರಸಿದ ರಾಮ

ಸಕಲ ವಿದ್ಯೆಯ ಗಳಿಸಿಹ ರಾಮ

ಶಬರಿಯ ಶಾಪವ ಬಿಡಿಸಿದ ರಾಮ

ವಾಲಿ ಸಂಹಾರಕ ಧೀರ ರಾಮ

ರಾವಣ ದರ್ಪವ ಇಳಿಸಿದ ರಾಮ

ರಾಮರಾಜ್ಯದ ಸ್ಥಾಪಕ ರಾಮ

ರಘುಪತಿ ರಾಘವ ರಾಜಾ ರಾಮ

ರಾಮನ ಕಂಡೀರಾ ನೀವು ರಾಮನ ಕಂಡೀರಾ

ದಶರಥ ನಂದನ ರಾಮನ ಕಂಡೀರಾ

ಜಯಜಯರಾಮ ಜಯಘನಶ್ಯಾಮ

ರಘುಕುಲ ತಿಲಕ ಆನಂದರಾಮ

ಸಕಲರ ಸಲಹುವ ಸೀತಾರಾಮ

ರಾಮರಾಜ್ಯವ ಆಳಿದ ರಾಮ

ರಾಮನ ಕಂಡೀರಾ ನೀವು ರಾಮನ ಕಂಡೀರಾ

ಈ ಪ್ರಭಾಕರ ಶರ್ಮನ ರಾಮನ ಕಂಡೀರಾ

ಸೋಮವಾರ, ಫೆಬ್ರವರಿ 17, 2025

ಮಾನಗೇಡಿ ಮಂಗ ಬಂತಮ್ಮ

                                                                 
 


ಮಾನಸ ಸರೋವರಕ್ಕೆ ಮಾನಗೇಡಿ ಮಂಗ ಬಂತಮ್ಮ

ರಂಗನ ಧ್ಯಾನಕೆ ಭಂಗ ತಂತಮ್ಮ           Iಪಲ್ಲವಿI

ಶಿವ ಪೂಜೆಯಲಿ ಕರಡಿ ಬಂದಂತೆ

ಪತಂಗದ ದಾರ ಹರಿದು ಬಿದ್ದಂತೆ

ಕಲ್ಪವೃಕ್ಷಗಳೇ ಕೊಚ್ಚಿ ಹೋದಂತೆ  

ಕಾಮಧೇನುವಿನ ಕ್ಷೀರವೇ ನಿಂತಂತೆ         I 1 I

ಮಾನಸ ಸರೋವರಕ್ಕೆ ಮಾನಗೇಡಿ ಮಂಗ ಬಂತಮ್ಮ

ಯಜ್ಞ ಕುಂಡದಲಿ ಹಲ್ಲಿ ತಾ ಬಿದ್ದಂತೆ

ತಪವ ಮಾಡುವಾಗ ಮೇನಕೆ ಬಂದಂತೆ

ಋಷಿಗಳ ಆಶ್ರಮಕೆ ರಕ್ಕಸ ಬಂದಂತೆ

ಪಾಯಸಕ್ಕೆ ಹುಳಿಯನು ಹಿಂಡಿದಂತೆ                  I 2 I

ಮಾನಸ ಸರೋವರಕ್ಕೆ ಮಾನಗೇಡಿ ಮಂಗ ಬಂತಮ್ಮ

ವಾಯುವಿನಲ್ಲಿ ತೂರಿ ಬಂತೆ

ಉಸುರಿನಲ್ಲಿ ಸೇರಿ ಬಂತೆ

ಸೂರಿನಿಂದ ಜಾರಿ ಬಂತೆ

ಹಿಂದಿನಿಂದ ಹಾರಿ ಬಂತೆ                    I 3 I

ಮಾನಸ ಸರೋವರಕ್ಕೆ ಮಾನಗೇಡಿ ಮಂಗ ಬಂತಂತೆ  

ಅದು ಹೇಗೆ ಬಂತೋ ತಿಳಿಯಾದಂತೆ

ಬಂದೇ ಬಂತಂತೆ ಧ್ಯಾನಕೆ ಭಂಗವ ತಂತಂತೆ

ಮಾನಸ ಸರೋವರಕ್ಕೆ ಮಾನಗೇಡಿ ಮಂಗ ಬಂತಂತೆ I 4 I

ರಂಗ ಬಾರೋ ವಿಠ್ಠಲ ಬಾರೋ ವೈಕುಂಠದಿ ಹರಿಯೆ ಬಾರೋ

ಮಾನಗೇಡಿ ಮಂಗನ ಹಿಡಿದು ನಿನ್ನಯ ಧ್ಯಾನಕೆ ತನ್ಮಯ ನೀಡಿ

ಧ್ಯಾನ ಮಗ್ನ ಪ್ರಭಾಕರನ ಮಂಗನ ಭಂಗದಿ ನೀ ಕಾಪಾಡ ಬೇಕಂತೆ 


ರಚನೆ : ಡಾ. ಪ್ರಭಾಕರ್ ಬೆಳವಾಡಿ      

ಗುರುವಾರ, ಫೆಬ್ರವರಿ 13, 2025

ಕರುಣಿಸೋ ರಂಗ ಕರುಣಿಸೋ

 

ಕರುಣಿಸೋ ರಂಗ ಕರುಣಿಸೋ


ಕರುಣಿಸೋ ರಂಗ ಕರುಣಿಸೋ     II  ಪಲ್ಲವಿ II

 

ಆಡಿಸೋ ರಂಗ ಕರುಣಿಸೋ

ಕಾಡಿಸಲೇನು ಪೀಡಿಸಲೇನು ಬಂದೆನ್ನ ಕರುಣಿಸೋ    II  ಅನುಪಲ್ಲವಿ II

 

ಪರಿ ಪರಿ ಪರೀಕ್ಷೆಯ ಮಾಡಿದರೇನು

ಉರಿಯುವ ಬೆಂಕಿಗೆ ದೂಡಿದರೇನು

ಗುರಿಯನೇ ಇಟ್ಟು ಬಾಣವ ಹೂಡಿದರೇನು

ಹರಿ ನಿನ್ನ ಬಳಿಗೇ ಬರುವೆನೋ ನಾನು       IIII

 

ಆಡಿಸೋ ರಂಗ ಕರುಣಿಸೋ

ಕಾಡಿಸಿ ಪೀಡಿಸಿ ಕರುಣಿಸೋ

 

ಸುಳಿಯ ಸೆಳೆತಕೆ ನೀ ಒತ್ತಿದರೇನು

ಉಳಿಯನೇ ಹಿಡಿದು ಕೆತ್ತಿದರೇನು

ಕುಳಿತು ಧ್ಯಾನವಾ ಮಾಡುವೆ ನಾನು

ಒಳಿತನೇ ರಂಗ ಮಾಡುವೆ ನೀನು           II  II

 

ಆಡಿಸೋ ರಂಗ ಕರುಣಿಸೋ

ಕಾಡಿಸಿ ಪೀಡಿಸಿ ಕರುಣಿಸೋ

 

ಕೋರಿ ನಿಂದಿಹೆನಿಂದು, ತೂರಿ ಚಕ್ರವನಿಂದು

ಹಾರಿಸೋ ರಂಗ ಮನದ ಮಲಿನವನಿಂದು

ತೋರಿಸೋ ಬಂದು ನೀ ಸನ್ಮಾರ್ಗವನಿಂದು

ಸ್ಮರಿಸುತ ಬಂದಿಹೆ ಗಂಗೆಯಲಿ ಮಿಂದು        IIII

 

ಕಾಡಿಸಲೇನು ಪೀಡಿಸಲೇನು ಬಂದೆನ್ನ ಕರುಣಿಸೋ

ಭಕುತ ನಿನ್ನೀ ಪ್ರಭಾಕರ ಶರ್ಮನ ಪಾಲಿಸೋ

ಕರುಣಿಸೋ ರಂಗ ಕರುಣಿಸೋ

ರಚನೆ : ಡಾ. ಪ್ರಭಾಕರ್ ಬೆಳವಾಡಿ

ಬುಧವಾರ, ಜನವರಿ 29, 2025

ಬಾಲಕೃಷ್ಣ ಅಂದು ಇಂದು

 


ಬಾಲಕೃಷ್ಣ ಅಂದು ಇಂದು 

ಅಂಗಳದಲ್ಲಿ ಆಡುತ್ತಾ ಮಣ್ಣ ಮುಕ್ಕಿದೆಯೇನೋ

ತೆರೆ ನಿನ್ನ ಬಾಯಿ ಕಕ್ಕೆಂದಳು ಅಮ್ಮ ಗಾಬರಿಯಾಗಿ

ಮುಸುನಗುತ ಬಾಲ, ತೆರೆಯುತ್ತಾ ಬಾಯಿ ನೋಡೆಂದ

ವಿಶ್ವವನೇ ಕಂಡು ನೋಡಿದಳಾ ತಾಯಿ ಬೆರಗಾಗಿ  

 

ಮುಟ್ಟಬ್ಯಾಡವೋ ಕಂದ, ನೋಡದಿರೆಲೋ ಕಂದ

ನೀನಿನ್ನೂ ಸಣ್ಣವ, ದೊಡ್ಡವನಾಗುವ ತನಕ ಮೊಬೈಲಾ

ನಸುನಗುತ ಬಾಲ, ಒತ್ತುತ್ತಾ, ಕರೆದು  ಅವ್ವ ನೋಡೆಂದ

ವಿಶ್ವವನೇ ಕಂಡು ಮುತ್ತಿಟ್ಟಲು ತಾಯಿ ಹಿಚಕುತ್ತಾ ಗಲ್ಲಾ.

ರಚನೆ : ಡಾ. ಪ್ರಭಾಕರ್ ಬೆಳವಾಡಿ 

ಸೋಮವಾರ, ಜನವರಿ 27, 2025

ಶ್ರೀ ಗುರುರಾಘವೇಂದ್ರ ಭಕ್ತಿ ಗೀತೆ

 

ಗುರು ರಾಯರನ್ನು ಒಲಿಸುವುದು ಹೇಗೆ?

Sri Raghavendra Photos | Sri Raghavendra Images | Guru Shree ...
ತುಂಗೆಯ ಗರ್ಭದಿ ಸ್ನಾನವ ಮಾಡಿ
ಮಡಿಯನು ಉಟ್ಟು ಧ್ಯಾನವ ಮಾಡಿ
ಮೂಲ ರಾಮನ ಕೃಪೆಯನು ಬೇಡಿ
ರಾಯರ ದರ್ಶನ ಮಾಡಲು ಹೊರಡಿ

ರಾಯರ ನೆನೆಯುತ ಮುಂದಕೆ ಸಾಗಿ
ಉರುಳು ಸೇವೆಯ ಮಾಡಿಪರಾಗಿ
ಗುರುಗಳ ಸೇವೆ ಮಾಡಲು ಹೋಗಿ
ರಾಯರ ಪುಣ್ಯ ಪಡೆಯುವರಾಗಿ

ತೀರ್ಥವ ಕುಡಿದು ಪವಿತ್ರರಾಗಿ
ಅಕ್ಷತೆ ಪಡೆದು ಪಾವನರಾಗಿ
ಅನ್ನಪ್ರಸಾದವ ಸೇವಿಪರಾಗಿ
ರಥವನು ಎಳೆಯಲು ಬದ್ಧರಾಗಿ

ನಾಲಿಗೆಯಲ್ಲಿ ರಾಯರ ನುಡಿಯು
ಮಸ್ತಕದಲ್ಲಿ ಮಂತ್ರಾಲಯವು
ತಗ್ಗಿ ನಡೆದರೆ ಬೃಂದಾವನವು
ಬಗ್ಗಿ ನೋಡಿದರೆ ರಾಯರ ಪಾದವು

ಮಾಡುತ ನಡೆಯೋ ಒಳ್ಳೆಯ ಕರ್ಮ
ರಾಯರ ಒಲಿಸಲು ಅದುವೇ ಮರ್ಮ
ಅವರ ಧ್ಯಾನವಾ ಮಾಡುತಾ ಹೋಗು
ಬೃಂದಾವನಕೆ ನೀ ತಪ್ಪದೇ ಬಾಗು

ಭಕ್ತ ಪ್ರಭಾಕರ ಬರೆದಿಹ ರೀತಿ
ಪಾಲಿಸೆ ಸಿಗುವುದು ರಾಯರ ಪ್ರೀತಿ

ರಚನೆ : ಡಾ.  ಪ್ರಭಾಕರ್ ಬೆಳವಾಡಿ

ಶುಕ್ರವಾರ, ಜನವರಿ 24, 2025

ಹನುಮನ ಧ್ಯಾನವ ಮಾಡಿ

 

ಹನುಮನ ಧ್ಯಾನವ ಮಾಡು



 

ಬಿಡುವೇನೇನಯ್ಯ ಹನುಮ ಬಿಡುವೇನೇನಯ್ಯ

ನಿನ್ನ ಬಿಡುವೇನೇನಯ್ಯ                       

 

ನಿರತವೂ ಧ್ಯಾನ ಮಾಡುತಾ ನಿನ್ನ

ಊರುತ ಮಂಡಿಯ ಬೇಡುವೆ ನಿನ್ನ

ಮುಕ್ತಿಯು ಎನಗೆ ಬರುವಾ ತನಕ

ಶಕ್ತಿಯ ನೀಡೋ ಇರುವಾ ತನಕ

ಬಿಡುವೇನೇನಯ್ಯ ನಾನು ಬಿಡುವೇನೇನಯ್ಯ         

 

ಬಾಲವ ಸುತ್ತಿ ಮೇಲಕೆ ಎತ್ತಿ

ಭಯವನು ಬಿತ್ತಿ ಭುವಿಗೇ ಒತ್ತಿ

ಹಚ್ಚಲು ಸುತ್ತ ಬೆಂಕಿಯ ಹುತ್ತ

ಅಂಜುವನೇನೋ ನಿನ್ನಯ ಭಕ್ತ  

ಬಿಡುವೇನೇನಯ್ಯ ನಾನು ಬಿಡುವೇನೇನಯ್ಯ         

 

ಬಿಡುವೇನೇನಯ್ಯ ಹನುಮ ಬಿಡುವೇನೇನಯ್ಯ

ಗದೆಯನೇ ಎತ್ತಿ ಬೀಸಿದರೇನು

ಎದೆಯನೇ ಪಾದದಿ ಒತ್ತಿದರೇನು

ನೀಡಲು ನೀನು ಅಗಣಿತ ಶಿಕ್ಷೆ

ಅದುವೇ ಎನಗೆ ರಾಮರಕ್ಷೆ

ಬಿಡುವೇನೇನಯ್ಯ ನಾನು ಬಿಡುವೇನೇನಯ್ಯ         

 

ಬಿಡುವೇನೇನಯ್ಯ ನಾನು ಬಿಡುವೇನೇನಯ್ಯ

ರಭಸದಿ ಗಾಳಿ ಬೀಸಿದರೇನು

ತರಗೆಲೆಯಂತೆ ಉದರಿದರೇನು   

ಎದೆಯಾ ಸೀಳಿ ನಕ್ಕರೂ ನೀನು 

ಅಂಜೆನು ಹನುಮ ಎಂದಿಗೂ ನಾನು  

ಬಿಡುವೇನೇನಯ್ಯ ನಾನು ಬಿಡುವೇನೇನಯ್ಯ         

 

ಬಿಡುವೇನೇನೋ ಹನುಮ ಬಿಡುವೇನೇನಯ್ಯ

ಭಕ್ತಿಯ ಭವದಲಿ ಮುಳುಗಿಹೆ ನಾನು  

ಹಾರುತ ಬಂದು ಕರುಣಿಸೋ ನೀನು  

ದರುಶನ ನೀನು ನೀಡುವ ತನಕ

ಜ್ಞಾನದ ಬೆಳಕ ತೋರುವ ತನಕ

ಬಿಡುವೇನೇನಯ್ಯ ನಾನು ಬಿಡುವೇನೇನಯ್ಯ         

 

ಬಿಡುವೇನೇನಯ್ಯ ಹನುಮ ಬಿಡುವೇನೇನಯ್ಯ

ಶಿರದ ಮೇಲೆ ಹಸ್ತವನಿಟ್ಟು

ಕರಗಳ ಮುಟ್ಟಿ ಅಭಯವ ಕೊಟ್ಟು 

ಹರಸುವತನಕ ಬಿಡೆನೋ ನಾನು

ಶಬರಿಯ ಹಾಗೇ ಕಾಯುವೆ ನಾನು 

ಬಿಡುವೇನೇನಯ್ಯ ಹನುಮ ಬಿಡುವೇನೇನಯ್ಯ                

 

ಅಂಜನಿ ಪುತ್ರನ ಧ್ಯಾನವ ಮಾಡಿ

ನಿತ್ಯವೂ ಅವನ ಹಾಡನು ಹಾಡಿ

ಹನುಮನೇ ಬರುವನು ತಲೆ ತೂಗಿ

ಪ್ರಭಾಕರ ಶರ್ಮನ ಅವ ಅನುರಾಗಿ

ರಚನೆ: ಡಾ. ಪ್ರಭಾಕರ್ ಬೆಳವಾಡಿ

Let The Earth Breathe

  [ Folk Tune Adaptation] [“Let the Earth Breathe”] [Dr Belavadi Prabhakar] [Refrain (Chorus)] Let the earth breathe, let the earth ...