ಬುಧವಾರ, ಜುಲೈ 3, 2024

 

ಚಿಟ್ಟೆ ಚಿಟ್ಟೆ    


 image courtesy Pinterest 
 

ಬೆರಳಿನ ಮುಂದೆ ಗೋಲಿಯು ಇತ್ತು

ನನ್ನಯ ಗಮನ ಗುರಿಯ ಮೇಲಿತ್ತು

ಎದುರಿಗೆ ಇದ್ದವು ಹಲವಾರು ಗೋಲಿ

ನನಗೆ ಬೇಕಿತ್ತು ಆ ಬಣ್ಣದ ಗೋಲಿ

 

ಬೆರಳನು ಬಾಗಿಸಿ ರೊಯ್ಯನೆ ಬಿಟ್ಟೆ

ಹಾರುತ ಬಂದಿತು ಬಣ್ಣದ ಚಿಟ್ಟೆ

ಗೋಲಿಯ ರಭಸಕೆ ತಗುಲಿತು ರೆಕ್ಕೆ

ಅಳುತಲಿ ನಿಂದೆ ದುಃಖವು ಉಕ್ಕೆ

 

ತಿಳಿಯದೆ ಆಯಿತೆ ಚಿಟ್ಟೆಗೆ ಪೆಟ್ಟು  

ಕ್ಷಣದಲಿ ಕಂಡೆನು ಚಿಟ್ಟೆಯ ಗುಟ್ಟು

ಬಿದ್ದಿಹ ಚಿಟ್ಟೆ ನೋಡದೋ ಪಕ್ಕ

ನೋಡಲು ಹೋದರೆ ಹಾರಿತೆ ಠಕ್ಕ!

 

ರಚನೆ: ಡಾ. ಬೆಳವಾಡಿ ಪ್ರಭಾಕರ್

ಸೋಮವಾರ, ಜುಲೈ 1, 2024

 ಕಾಲದ ಮಹಿಮೆ

                                                                image courtesy Pinterest 


 

ಬಿಸಿಲಿನ ತಾಪಕೆ ಅದರುತ ಹಾರಿ

ಕಡಲಿನ ನೀರು ನಭವನು ಸೇರಿ

ಧೂಳಿನ ಕಣಗಳು ಮೋಡದಿ ತೂರಿ

ಮಳೆಯೇ ಸುರಿದಿದೆ ನೋಡದೋ ಜಾರಿ

 

ಬತ್ತಿದ ಗದ್ದೆಗೆ ನೀರಿನ ಹರಿವು

ಭತ್ತದ ತೆನೆಗೆ ನಲಿವೋ ನಲಿವು

ಬಿತ್ತಿದ ರೈತನು ಮರೆತನು ನೋವು

ಭತ್ತದ ಹೊಟ್ಟನು ಮೆಲುಕಿದೆ ಗೋವು

 

ರೈತನ ಕಣಜ ತುಂಬಿತ್ತು

ಬಂಡಿಯು ಸಂತೆಗೆ ಬಂದಿತ್ತು

ವರುಣಗೆ ಪೂಜೆಯು ಸಂದಿತ್ತು

ನೋವಿನ ಛಾಯೆ ನಂದಿತ್ತು

 

ಬೀದಿಯ ಬದಿಯ ವ್ಯಾಪಾರಿ

ಹರಾಜು ಹಾಕಿದ ನಗೆ ಬೀರಿ

ಬಂಗಲೆ ಭೂಪ ಕೊಂಡುಂಡ

ದುಡಿದಾ ರೈತ ನಂಜುಂಡ

 

ರಚನೆ: ಡಾ. ಬೆಳವಾಡಿ ಪ್ರಭಾಕರ್


ಭವ್ಯರಾಗಿ ಬಾಳುವರಾಗಿ

  ಭವ್ಯರಾಗಿ ಬಾಳುವರಾಗಿ ಕರ್ತೃ: ಡಾ. ಪ್ರಭಾಕರ್ ಬೆಳವಾಡಿ ದಿವ್ಯ ಮಂತ್ರವ ಕಲಿಸುವರಾಗಿ ಭವ್ಯರಾಗಿ ಬಾಳುವರಾಗಿ I I ಪಲ್ಲವಿ I I ಯೋಗ್ಯರಾಗಿ ಭಾಗ್ಯವಂತರಾಗಿ ...