ಬುಧವಾರ, ಜನವರಿ 29, 2025

ಬಾಲಕೃಷ್ಣ ಅಂದು ಇಂದು

 


ಬಾಲಕೃಷ್ಣ ಅಂದು ಇಂದು 

ಅಂಗಳದಲ್ಲಿ ಆಡುತ್ತಾ ಮಣ್ಣ ಮುಕ್ಕಿದೆಯೇನೋ

ತೆರೆ ನಿನ್ನ ಬಾಯಿ ಕಕ್ಕೆಂದಳು ಅಮ್ಮ ಗಾಬರಿಯಾಗಿ

ಮುಸುನಗುತ ಬಾಲ, ತೆರೆಯುತ್ತಾ ಬಾಯಿ ನೋಡೆಂದ

ವಿಶ್ವವನೇ ಕಂಡು ನೋಡಿದಳಾ ತಾಯಿ ಬೆರಗಾಗಿ  

 

ಮುಟ್ಟಬ್ಯಾಡವೋ ಕಂದ, ನೋಡದಿರೆಲೋ ಕಂದ

ನೀನಿನ್ನೂ ಸಣ್ಣವ, ದೊಡ್ಡವನಾಗುವ ತನಕ ಮೊಬೈಲಾ

ನಸುನಗುತ ಬಾಲ, ಒತ್ತುತ್ತಾ, ಕರೆದು  ಅವ್ವ ನೋಡೆಂದ

ವಿಶ್ವವನೇ ಕಂಡು ಮುತ್ತಿಟ್ಟಲು ತಾಯಿ ಹಿಚಕುತ್ತಾ ಗಲ್ಲಾ.

ರಚನೆ : ಡಾ. ಪ್ರಭಾಕರ್ ಬೆಳವಾಡಿ 

ಸೋಮವಾರ, ಜನವರಿ 27, 2025

ಶ್ರೀ ಗುರುರಾಘವೇಂದ್ರ ಭಕ್ತಿ ಗೀತೆ

 

ಗುರು ರಾಯರನ್ನು ಒಲಿಸುವುದು ಹೇಗೆ?

Sri Raghavendra Photos | Sri Raghavendra Images | Guru Shree ...
ತುಂಗೆಯ ಗರ್ಭದಿ ಸ್ನಾನವ ಮಾಡಿ
ಮಡಿಯನು ಉಟ್ಟು ಧ್ಯಾನವ ಮಾಡಿ
ಮೂಲ ರಾಮನ ಕೃಪೆಯನು ಬೇಡಿ
ರಾಯರ ದರ್ಶನ ಮಾಡಲು ಹೊರಡಿ

ರಾಯರ ನೆನೆಯುತ ಮುಂದಕೆ ಸಾಗಿ
ಉರುಳು ಸೇವೆಯ ಮಾಡಿಪರಾಗಿ
ಗುರುಗಳ ಸೇವೆ ಮಾಡಲು ಹೋಗಿ
ರಾಯರ ಪುಣ್ಯ ಪಡೆಯುವರಾಗಿ

ತೀರ್ಥವ ಕುಡಿದು ಪವಿತ್ರರಾಗಿ
ಅಕ್ಷತೆ ಪಡೆದು ಪಾವನರಾಗಿ
ಅನ್ನಪ್ರಸಾದವ ಸೇವಿಪರಾಗಿ
ರಥವನು ಎಳೆಯಲು ಬದ್ಧರಾಗಿ

ನಾಲಿಗೆಯಲ್ಲಿ ರಾಯರ ನುಡಿಯು
ಮಸ್ತಕದಲ್ಲಿ ಮಂತ್ರಾಲಯವು
ತಗ್ಗಿ ನಡೆದರೆ ಬೃಂದಾವನವು
ಬಗ್ಗಿ ನೋಡಿದರೆ ರಾಯರ ಪಾದವು

ಮಾಡುತ ನಡೆಯೋ ಒಳ್ಳೆಯ ಕರ್ಮ
ರಾಯರ ಒಲಿಸಲು ಅದುವೇ ಮರ್ಮ
ಅವರ ಧ್ಯಾನವಾ ಮಾಡುತಾ ಹೋಗು
ಬೃಂದಾವನಕೆ ನೀ ತಪ್ಪದೇ ಬಾಗು

ಭಕ್ತ ಪ್ರಭಾಕರ ಬರೆದಿಹ ರೀತಿ
ಪಾಲಿಸೆ ಸಿಗುವುದು ರಾಯರ ಪ್ರೀತಿ

ರಚನೆ : ಡಾ.  ಪ್ರಭಾಕರ್ ಬೆಳವಾಡಿ

ಶುಕ್ರವಾರ, ಜನವರಿ 24, 2025

ಹನುಮನ ಧ್ಯಾನವ ಮಾಡಿ

 

ಹನುಮನ ಧ್ಯಾನವ ಮಾಡು



 

ಬಿಡುವೇನೇನಯ್ಯ ಹನುಮ ಬಿಡುವೇನೇನಯ್ಯ

ನಿನ್ನ ಬಿಡುವೇನೇನಯ್ಯ                       

 

ನಿರತವೂ ಧ್ಯಾನ ಮಾಡುತಾ ನಿನ್ನ

ಊರುತ ಮಂಡಿಯ ಬೇಡುವೆ ನಿನ್ನ

ಮುಕ್ತಿಯು ಎನಗೆ ಬರುವಾ ತನಕ

ಶಕ್ತಿಯ ನೀಡೋ ಇರುವಾ ತನಕ

ಬಿಡುವೇನೇನಯ್ಯ ನಾನು ಬಿಡುವೇನೇನಯ್ಯ         

 

ಬಾಲವ ಸುತ್ತಿ ಮೇಲಕೆ ಎತ್ತಿ

ಭಯವನು ಬಿತ್ತಿ ಭುವಿಗೇ ಒತ್ತಿ

ಹಚ್ಚಲು ಸುತ್ತ ಬೆಂಕಿಯ ಹುತ್ತ

ಅಂಜುವನೇನೋ ನಿನ್ನಯ ಭಕ್ತ  

ಬಿಡುವೇನೇನಯ್ಯ ನಾನು ಬಿಡುವೇನೇನಯ್ಯ         

 

ಬಿಡುವೇನೇನಯ್ಯ ಹನುಮ ಬಿಡುವೇನೇನಯ್ಯ

ಗದೆಯನೇ ಎತ್ತಿ ಬೀಸಿದರೇನು

ಎದೆಯನೇ ಪಾದದಿ ಒತ್ತಿದರೇನು

ನೀಡಲು ನೀನು ಅಗಣಿತ ಶಿಕ್ಷೆ

ಅದುವೇ ಎನಗೆ ರಾಮರಕ್ಷೆ

ಬಿಡುವೇನೇನಯ್ಯ ನಾನು ಬಿಡುವೇನೇನಯ್ಯ         

 

ಬಿಡುವೇನೇನಯ್ಯ ನಾನು ಬಿಡುವೇನೇನಯ್ಯ

ರಭಸದಿ ಗಾಳಿ ಬೀಸಿದರೇನು

ತರಗೆಲೆಯಂತೆ ಉದರಿದರೇನು   

ಎದೆಯಾ ಸೀಳಿ ನಕ್ಕರೂ ನೀನು 

ಅಂಜೆನು ಹನುಮ ಎಂದಿಗೂ ನಾನು  

ಬಿಡುವೇನೇನಯ್ಯ ನಾನು ಬಿಡುವೇನೇನಯ್ಯ         

 

ಬಿಡುವೇನೇನೋ ಹನುಮ ಬಿಡುವೇನೇನಯ್ಯ

ಭಕ್ತಿಯ ಭವದಲಿ ಮುಳುಗಿಹೆ ನಾನು  

ಹಾರುತ ಬಂದು ಕರುಣಿಸೋ ನೀನು  

ದರುಶನ ನೀನು ನೀಡುವ ತನಕ

ಜ್ಞಾನದ ಬೆಳಕ ತೋರುವ ತನಕ

ಬಿಡುವೇನೇನಯ್ಯ ನಾನು ಬಿಡುವೇನೇನಯ್ಯ         

 

ಬಿಡುವೇನೇನಯ್ಯ ಹನುಮ ಬಿಡುವೇನೇನಯ್ಯ

ಶಿರದ ಮೇಲೆ ಹಸ್ತವನಿಟ್ಟು

ಕರಗಳ ಮುಟ್ಟಿ ಅಭಯವ ಕೊಟ್ಟು 

ಹರಸುವತನಕ ಬಿಡೆನೋ ನಾನು

ಶಬರಿಯ ಹಾಗೇ ಕಾಯುವೆ ನಾನು 

ಬಿಡುವೇನೇನಯ್ಯ ಹನುಮ ಬಿಡುವೇನೇನಯ್ಯ                

 

ಅಂಜನಿ ಪುತ್ರನ ಧ್ಯಾನವ ಮಾಡಿ

ನಿತ್ಯವೂ ಅವನ ಹಾಡನು ಹಾಡಿ

ಹನುಮನೇ ಬರುವನು ತಲೆ ತೂಗಿ

ಪ್ರಭಾಕರ ಶರ್ಮನ ಅವ ಅನುರಾಗಿ

ರಚನೆ: ಡಾ. ಪ್ರಭಾಕರ್ ಬೆಳವಾಡಿ

ಭವ್ಯರಾಗಿ ಬಾಳುವರಾಗಿ

  ಭವ್ಯರಾಗಿ ಬಾಳುವರಾಗಿ ಕರ್ತೃ: ಡಾ. ಪ್ರಭಾಕರ್ ಬೆಳವಾಡಿ ದಿವ್ಯ ಮಂತ್ರವ ಕಲಿಸುವರಾಗಿ ಭವ್ಯರಾಗಿ ಬಾಳುವರಾಗಿ I I ಪಲ್ಲವಿ I I ಯೋಗ್ಯರಾಗಿ ಭಾಗ್ಯವಂತರಾಗಿ ...