ಛಾಯಾ ಚಿತ್ರ pinterest ಅವರಿಂದ ಕೃಪೆ
ಶೃಂಗೇರಿಯ ನವರಾತ್ರಿ ಉತ್ಸವ
ಶೃಂಗಗಿರಿಯ ಸಿರಿ ಬನಗಳಲಿ, ತುಂಗೆಯ ತಿಳಿ ಸೆರಗಿನಲಿ
ನವರಾತ್ರಿಯ ನವ ವೈಭವದ ಉತ್ಸಾಹದ ದಿನಗಳಲಿ
ನವದುರ್ಗೆಯರ ಭವ್ಯ ರೂಪದರ್ಶನ, ನಿತ್ಯ ನವ ನೂತನ.
ಮಧು ಕೈತಭ, ಶುಂಭ-ನಿಶುಂಭ, ಮಹಿಷಾಸುರರ
ಮರ್ಧಿನಿಯ ಹಿರಿಮೆಯ, ಛಲಬಿಡದ ಮಹಿಮೆಯ
ಕಹಳೆಯೋ, ಇದು ರಣ ಕೇಕೆಯ ಮೊಳೆತವೋ...
ರಕ್ಕಸರುಗಳ ದಾಳಿಯ, ಮಹಿಷರೂಪದ ಗೂಳಿಯ
ಸೊಕ್ಕನಡಗಿಸಿಹ ದೇವಿಯ, ಠಕ್ಕರಳಿಸಿದ ಮಾತೆಯ
ಡಿಂ ಡಿಮವೋ, ಇದು ರಣಚಂಡಿಯರ ಡಿಂ ಡಿಮವೋ.
ಜಗತ್ಪ್ರಸೂತಿಕೆ ಜಗನ್ಮಾತೆಯ, ಹಂಸವಾಹನೆ ಬ್ರಾಹ್ಮಿಯ,
ವೃಶಭವಾಹನೆ ಮಾಹೇಶ್ವರಿಯ, ಸೊಬಗಿನ ಐಸಿರಿಯೋ.
ಮಯೂರವಾಹನೆ ಕೌಮಾರಿಯ, ಗರುಡವಾಹನೆ ವೈಷ್ಣವಿಯ ,
ಕಂಗೊಳಿಪ ಕಣ್ಸೆಳೆವ ಸೋಜಿಗದ ರೋಚಕ ನೋಟವೋ.
ಇಂದ್ರಾಣಿಯ, ಮೋಹಿನಿಯ, ಚೈತನ್ಯದ ಸಿಂಹವೇರಿಪ ಚಾಮುಂಡಿಯ,
ಕಣ್ ಕಿಡಿಯ ಸುರಸುಂದರ ತ್ರಿಪುರ ಸುಂದರಿಯ ಚಿತ್ತಾರವೋ
ಗಜಲಕ್ಷ್ಮಿ, ರಾಜರಾಜೇಶ್ವರಿ ರಾರಾಜಿಸುವ ವಿಜಯದಶಮಿಯ
ವಿಜೃಂಭಣೆಯ ಮನಮೋಹಕ ದೃಷ್ಯದಾಲಿಂಗನವೋ
ನಿತ್ಯ ಹರಿದ್ರಾಕುಂಕುಮದಲಿ, ನಿತ್ಯ ತೇಯ್ದಗಂಧದ ಘಮದಲಿ
ಅಭಿಷೇಕದ ವೈಭವ, ನಿತ್ಯೋತ್ಸವ ದೇವಿ ನಿನಗೆ ನಿತ್ಯೋತ್ಸವ.
ಕಾಣರಿಯದ ವೈಭವದಲಿ, ವೀಣಾ ವಾದನದ ತರಂಗಗಳಲಿ
ಸಾಲಂಕೃತ ಮಂಟಪದಲಿ, ಮುತ್ತು,ರತ್ನಭರಿತ
ಸಿಂಹಾಸನದಲಿ,
ಪುಷ್ಪೋತ್ಸವ ತಾಯೆ ನಿನಗೆ ಪುಷ್ಪೋತ್ಸವ, ನಿತ್ಯೋತ್ಸವ.
ಶೃತಿ, ಸ್ಮೃತಿ, ಪುರಾಣ ಸಂಪುಟಗಳಲಿ, ಚತುರ್ವೇದ ಪಂಡಿತರ ಕಂಠ ತೇಲಿ
ಮಂತ್ರೋತ್ಸವ ತಾಯೆ ಮಂತ್ರೋತ್ಸವ, ನಿನ್ನ ಸ್ತುತಿಸುವ ಮಂತ್ರೋತ್ಸವ.
ಶೃಂಗೇರಿಯ ಭವ್ಯ ಪಥಗಳಲಿ, ತುಂಗೆ ನದಿಯ ಶಾಂತತೆಯ ತಟಗಳಲಿ
ಗುಡಿಗೋಪುರಗಳ ಉತ್ತುಂಗದಲಿ, ದೀಪೋತ್ಸವ ತಾಯೆ ದೀಪೋತ್ಸವ.
ಸ್ವರ ಲಹರಿಯ ಗಾಯನೋತ್ಸವ, ತಾಯೆ ನಿನಗೆ ನಿತ್ಯೋತ್ಸವ
ದೀಪೋತ್ಸವ ದೇವಿ ಧ್ಯಾನೋತ್ಸವ, ತಾಯೆ ಅನ್ನದಾನೋತ್ಸವ.
ತೆನೆ ಕಟ್ಟಿ, ಕಂದನೆಟ್ಟ, ಚಿನ್ನದಂಬಾರಿಯಲಿ, ನಿನ್ನ ಅಮೋಘ ದರ್ಶನ
ಮಂಗಳ ವಾದ್ಯ ಹಿಮ್ಮೇಳದಲಿ, ಕೀಲ ನರ್ತನ, ಡೋಲು ಸಹಿತ ಕೀರ್ತನ.
ನೆರೆದ ಭಕ್ತರ ಮನಸೆಳೆವ ಆ ದಿವ್ಯ ರಥದಲಿ, ತೆಂಗ ಒಡೆದ, ಬಾಳೆ ಎಸೆದ,
ಆರತಿಯನೆತ್ತ ಲೀಲೆಯಲಿ, ನಿನಗೆ ರಥೋತ್ಸವ, ತಾಯೆ ರಥೋತ್ಸವ.
ಭೃಂಗಗಳ ಸವಿ ಝೇಂಕಾರದಲಿ, ತುಂಗಾ ನದಿಯ ಪಾವನದೊಡಲಲಿ
ಮತ್ಸ್ಯಗಳು ಕುಣಿದು ನರ್ತಿಸುವಲಿ, ಸತ್ವಭರಿತ ವೇದಘೋಷಗಳ ಲೇಪನ.
ನಾಗಸ್ವರಗಳ ನೀನಾದದಲಿ, ಶೃಂಗಗುರುವರ್ಯರ ನೇತೃತ್ವದಲಿ
ನಿನಗೆ ತೆಪ್ಪೋತ್ಸವ, ತಾಯೆ ತೆಪ್ಪೋತ್ಸವ, ನಿತ್ಯೋತ್ಸವ.
ಮಹಿಷಾಸುರನ ಮರ್ಧಿಸಿದ ದೇವರರಿಮೆಯ, ಸಂವತ್ಸರ, ಮನ್ವಂತರ ನೆನೆಸುವ
ವಿಜಯೋತ್ಸವ ತಾಯೆ, ನಿನಗೆ ವಿಜಯೋತ್ಸವ, ದೇವಿ ವಿಜಯೋತ್ಸವ.
ದೀಪೋತ್ಸವ ತಾಯೆ, ದೀಪೋತ್ಸವ, ವಿಜಯೋತ್ಸವ ತಾಯೆ, ವಿಜಯೋತ್ಸವ.
ಊದುತ ದೇವಿಯ ರಣ ಕಹಳೆಯ, ಬಾರಿಸು ಮಾತೆಯ ಡಿಂ ಡಿಮವ,
ಹಾಡುತ ದೇವಿಯ ವಿಜಯ ಗಾಥೆಯ, ಬಾರಿಸು ಮಾತೆಯ ಡಿಂ ಡಿಮವ.
ರಚನೆ: ಡಾ. ಪ್ರಭಾಕರ್ ಬೆಲವಾಡಿ
ಉತ್ತರಹಳ್ಳಿ, ಬೆಂಗಳೂರು .
ದೂ: 9448488910