ಭಾನುವಾರ, ಮಾರ್ಚ್ 5, 2023

ಮಿನಿಭಾರತ

 ರಚನೆ: ಡಾ.ಪ್ರಭಾಕರ ಬೆಲವಾಡಿ 

photo credit PINTEREST courtesy


ಊರ ಮಂದಿರದ ಮುಂಭಾಗದಲ್ಲಿ “ಶ್ರೀ ಕೃಷ್ಣ ಜನ್ಮಾಷ್ಟಮಿ” ಉತ್ಸವದ ಪ್ರಯುಕ್ತ ಹಾಕಿದ್ದ ಬೃಹತ್ ಪೆಂಡಾಲಿನಲ್ಲಿ ದಾಸರ ಹರಿಕೀರ್ತನೆ ನಡೆದಿರುತ್ತದೆ. ಕಿಕ್ಕಿರಿದ ಜನಸ್ತೋಮ.

ದಾಸರು ಸಭಿಕರನ್ನು ಉದ್ದೇಶಿಸಿ, “ಇಂದು ವಿಶಿಷ್ಟವಾದ ಮಿನಿಭಾರತ  ಕತೆಯನ್ನು ಹೇಳುತ್ತೇನೆ, ಆಲಿಸಿ” ಎಂದು ಕೀರ್ತನವನ್ನು ಪ್ರಾರಂಭಿಸುತ್ತಾರೆ.

ಹಸ್ತಿನಾಪುರದ ಚಕ್ರವರ್ತಿ  ಧೃತರಾಷ್ಟ್ರನ ಅರಮನೆಯ ಸಭಾಂಗಣದಲ್ಲಿ ಬಹಳ ಕುತೂಹಲದಿಂದ ಕೌರವರು, ಪಾಂಡವರು, ಭೀಷ್ಮ, ಕೃಪಾಚಾರ್ಯ, ವಿಧುರ, ಧ್ರೋಣಾಚಾರ್ಯ, ಅಂಗ ಪ್ರಭು ಕರ್ಣ, ಇತರ ಅಕ್ಕಪಕ್ಕದ ಪುಟ್ಟ ದೇಶದ ಅರಸರೆಲ್ಲಾ ನೆರೆದಿರುತ್ತಾರೆ. ರಾಜಭವನದ ವಿಶೇಷವಾದ ಸ್ಥಳಗಳ ಅಂತಸ್ತಿನಿಂದ ದ್ರೌಪದಿ, ಕುಂತಿ ಇತ್ಯಾದಿ ಕುರುವಂಶದ ಯುವರಾಣಿಯರೆಲ್ಲಾ ಕಣ್ಣು ಮಿಟುಕಿಸದೇ ಆತಂಕಭರಿತರಾಗಿ ಕುಳಿತಿರುತ್ತಾರೆ. ಮಂಡೋದರಿ ತನ್ನ ಅಚ್ಚುಮೆಚ್ಚಿನ ಪುತ್ರನ ವಿಜಯಕ್ಕಾಗಿ ದೇವಮಂದಿರದಲ್ಲಿ ಪೂಜಾ ನಿರತಳಾ ಗಿರುತ್ತಾಳೆ.

ಧುರ್ಯೋಧನ ಹಸ್ತಿನಾಪುರದ ರಾಜಪಟ್ಟವನ್ನು ಧರ್ಮರಾಯನ ಬದಲು ತನಗೆ ನೀಡಬೇಕೆಂದು ಪಟ್ಟು ಹಿಡಿದಿರುತ್ತಾನೆ. ಇದಕ್ಕೆ ಒಪ್ಪದ ಪಾಂಡವರು  ಯುದ್ಧವಾಗಲಿ ಎಂದು ಕೇಳಿದರೂ ಒಪ್ಪದ ಕೌರವರು ಪಗಡೆಯ ಆಟಕ್ಕೆ ಹಠ ಹಿಡಿಯುತ್ತಾರೆ. ರಣರಂಗದಲ್ಲಿ ಯುಧ್ಧವಾಗಲಿ ಎಂಬ ಭೀಮ, ಅರ್ಜುನರ ಸಲಹೆಯನ್ನು ಧೃತರಾಷ್ಟ್ರ ನಿರಾಕರಿಸಿ, ಪಗಡೆಯ ಆಟದ ಫಲಿತಾಂಶವೇ ನಿರ್ಣಾಯಕ ಎಂದು ಘೋಷಿಸುತ್ತಾನೆ. ಇದಕ್ಕೆ ಶಕುನಿ ಮಾಮನ ಕುಮ್ಮಕ್ಕೆ ಕಾರಣವೆಂದು ಭೀಷ್ಮ, ವಿಧುರ, ಧ್ರೋಣಾಚಾರ್ಯ ಮತ್ತು ಕೃಪಾಚಾರ್ಯರಿಗೆ ತಿಳಿದಿದ್ದರೂ ಅಸಾಯಕರಾಗಿ ಕೈಗಳನ್ನು ಹಿಚುಕಿಕೊಳ್ಳುತ್ತಾ ಭಾರವಾದ ಮನಸ್ಸಿನಿಂದ ಆಸೀನರಾಗಿರುತ್ತಾರೆ.

ವಿಧುರನ ನೀತಿಯಿಂದ ಭೀಮ ಮತ್ತು ಕೃಷ್ಣ ಒಂದು ಒಪ್ಪಂದಕ್ಕೆ ಬಂದಿರುತ್ತಾರೆ. ಧುರ್ಯೋಧನನ ಗರ್ವದಿಂದ, ಶಕುನಿಯ ಕುಯುಕ್ತಿಯಿಂದ ಇಂತಹ ಘೋರ ಅನ್ಯಾಯ ನಡೆಯ ಬಹುದಾಗಿದೆ, ಇದನ್ನು ಹೇಗಾದರೂ ಮಾಡಿ ತಪ್ಪಿಸಬೇಕು, ಇದರಲ್ಲಿ ಕೃಷ್ಣನ ಪಾತ್ರವೇ ಮುಖ್ಯವೆಂದು.

ಪಗಡೆಯ ಆಟಕ್ಕೆ ಸರ್ವ ಸಕಲ ಸಿದ್ಧತೆ ಆಗಿರುತ್ತದೆ. ಒಂದು ಬದಿಯಲ್ಲಿ ಧರ್ಮರಾಯ ಮತ್ತೊಂದು ಬದಿಯಲ್ಲಿ ಧುರ್ಯೋಧನ, ಅವನ ಎಡ ಭುಜಕ್ಕೆ ತಾಗಿದಂತೆ ಶಕುನಿ ಕುಳಿತುಕೊಳ್ಳುತ್ತಾರೆ.

ರಾಜಪುರೋಹಿತರು ಶಂಖ ಊದುವುದರೊಂದಿಗೆ ಪಂದ್ಯ ಪ್ರಾರಂಭವಾಗುತ್ತದೆ. ಧರ್ಮರಾಯ ದಾಳವನ್ನು ಉದುರಿಸುತ್ತಾನೆ. ಅದರಂತೆ ನಡೆ ಪ್ರಾರಂಭವಾಗುತ್ತದೆ. ಧರ್ಮರಾಯನದು ಹಸಿರು ಕಾಯಿಗಳು. ಧುರ್ಯೋಧನನದು ಹಳದಿ ಬಣ್ಣದ್ದು. ಮೊದಲನೆಯ ಆಟ ಪಾಂಡವರ ಪರವಾಗುತ್ತದೆ. ಶಕುನಿ ಕ್ಯಾತೆ ತೆಗೆಯುತ್ತಾನೆ. ಚಾಣಾಕ್ಷತನದಿಂದ ಮೊದಲನೆಯ ಆಟ ಯಾವಾಗಲೂ ದೇವರಿಗೆ ಬಿಟ್ಟದ್ದು. ಆದ್ದರಿಂದ ಇದನ್ನು ಗಣನೆಗೆ ತೆಗೆದುಕೊಳ್ಳಬಾರದು ಎನ್ನುತ್ತಾನೆ.

ಮೊದಲೇ ಕೋಪ ಭರಿತನಾಗಿದ್ದ ಭೀಮ ತನ್ನ ಗಧೆಯನ್ನು ಭೂಮಿಗೆ ಅಪ್ಪಳಿಸುತ್ತಾನೆ. ಸಭಾಂಗಣದ ನೆಲವೆಲ್ಲಾ ಅಲುಗಾಡಿ, ಉತ್ಪತ್ತಿಯಾದ ಶಬ್ದ ಅಲ್ಲಿರುವ ಎಲ್ಲಾ ಕಂಬಗಳಿಂದ ಪ್ರತಿಧ್ವನಿಸುತ್ತದೆ. ಪಕ್ಕದಲ್ಲೇ ಆಸೀನರಾಗಿದ್ದ ನಕುಲ ಸಹದೇವರು ಭೀಮನನ್ನು ಸಂತೈಸುತ್ತಾರೆ.

ಅರ್ಜುನ ಉದ್ವೇಗವನ್ನು ತಡೆಯಲರಾದೆ ತನ್ನ ಬಿಲ್ಲಿನ ತಂತಿಯನ್ನು ಮೀಟುತ್ತಾನೆ. ಅದರ ಜೇಂಕಾರಕ್ಕೆ ನೆರೆದಿದ್ದವರೆಲ್ಲಾ ಕಂಪಿಸುತ್ತಾರೆ. ಭೀಷ್ಮ ಪಿತಾಮಹ ಕಣ್ಸನ್ನೆಯಿಂದ ಅರ್ಜುನನನ್ನು ಸುಮ್ಮನಾಗಿಸುತ್ತಾರೆ.

ಮುಂದಿನ ಆಟಗಳನ್ನೆಲ್ಲಾ ಧುರ್ಯೋಧನ ಗೆಲ್ಲುತ್ತಾ ಹೋದಂತೆ ಧರ್ಮರಾಯ ತನ್ನ ಸರ್ವಸ್ವವನ್ನೂ ಕಳೆದುಕೊಂಡು ಬಿಡುತ್ತಾನೆ. ಈ ಸಮಯದಲ್ಲಿ ಇನ್ನೂ ಅವಮಾನಿಸಬೇಕೆಂದು ಮತ್ತು ಹಿಂದೆ ತನಗಾದ ಅಪಹಾಸ್ಯಕ್ಕೆ ಮುಯ್ಯಿ ತೀರಿಸಿಕೊಳ್ಳಬೇಕೆಂದು ಧುರ್ಯೋಧನ ಮತ್ತೆ ಧರ್ಮರಾಯನನ್ನು ಪ್ರಚೋದಿಸಿ, ಒಂದು ವೇಳೆ ಧರ್ಮರಾಯ ಆಟ ಮುಂದುವರೆಸಲು ಬಯಸಿದರೆ, ಧ್ರೌಪದಿಯನ್ನು ಪಣಕ್ಕೆ ಇಟ್ಟು ಆಡಬಹುದೆಂದು ಸೂಚಿಸುತ್ತಾನೆ.

ಈ ಸೂಚನೆಗೆ ಭೀಮ, ಅರ್ಜುನರ ಮೊದಲಾಗಿ ಎಲ್ಲರೂ ತಮ್ಮ ಅಸಮ್ಮತಿಯನ್ನು ಪ್ರಕಟಿಸಿ, ಪ್ರತಿಭಟಿಸುತ್ತಾರೆ. ಆದರೆ, ದುಶ್ಯಾಸನ, ಕರ್ಣ ಆದಿಯಾಗಿ ಕೌರವ ಪುತ್ರರೆಲ್ಲಾ ಧುರ್ಯೋಧನನನ್ನು ಬೆಂಬಲಿಸುತ್ತಾರೆ. ಕುಂತಿ ಮತ್ತು ಗಾಂಧಾರಿ ತಮ್ಮ ಮನಸ್ಸಿನಲ್ಲೇ ವ್ಯತೆ ಪಡುತ್ತಾರೆ. ಧ್ರೌಪದಿಯ ಪರಿಸ್ಥಿತಿಯಂತೂ ಹೇಳಲಸಾಧ್ಯದಂತೆ ಆಗಿಬಿಡುತ್ತದೆ.

ಭೀಷ್ಮನಾದಿಯಾಗಿ ಮುತ್ಸುದ್ದಿಗಳೆಲ್ಲಾ ತಿಳಿದೂ, ಬೋನಿನಲ್ಲಿ ಬಿದ್ದಿರುವ ಘೋರ ವ್ಯಾಘ್ರಗಳಂತೆ ಚಡಪಡಿಸುತ್ತಾರೆ.

ವಿಧುರ ಕೆಲ ಕ್ಷಣ ಅಲ್ಲಿಂದ ಮಾಯವಾಗಿ ಗೌಪ್ಯವಾಗಿ ಕೃಷ್ಣನ ಜೊತೆ ಮಾತನಾಡಿ ಬಂದು ನೇರವಾಗಿ ಧ್ರೌಪದಿ ಇರುವಲ್ಲಿಗೆ ಹೋಗಿ  ಅವಳನ್ನು ಒಪ್ಪಿಸಿ ಜೂಜಾಟದ ವೇದಿಕೆಗೆ ಬರುವಂತೆ ಮಾಡುತ್ತಾನೆ.

ಧರ್ಮರಾಯ ಮರುಮಾತಿಲ್ಲದೇ ಧ್ರೌಪದಿಯನ್ನು ಒಂದು ಷರತ್ತಿನೊಂದಿಗೆ ಪಣಕ್ಕೆ ಒಡ್ಡುತ್ತಾನೆ. ಒಂದುವೇಳೆ ಈ ಪಂದ್ಯವನ್ನು ಧುರ್ಯೋಧನ ಸೋತರೆ, ಹಸ್ತಿನಾಪುರವನ್ನು ಆಳುವ ಮಹದಾಸೆಯನ್ನು ಬಿಟ್ಟು, ತನ್ನ ಎಲ್ಲಾ ಕೌರವ ತಮ್ಮಂದಿರೊಂದಿಗೆ ಅನತಿ ದೂರದ ಅರಣ್ಯದಲ್ಲಿ ನೆಲೆಸಬೇಕೆಂದು ತಿಳಿಸುತ್ತಾನೆ.

ಧುರ್ಯೋಧನ ಶಕುನಿ ಮಾಮನ ಜೊತೆ ಪರಾಮರ್ಶಿಸಿ ಈ ಷರತ್ತಿಗೆ ಒಪ್ಪುತ್ತಾನೆ. ಶಕುನಿಗೆ ತನ್ನ ಕುಟಿಲ ದಾಳಗಳ ಮೇಲೆ ಅಪಾರ ನಂಬಿಕೆ ಇರುತ್ತದೆ.

ಪಂದ್ಯ ಅಂತಿಮಘಟ್ಟಕ್ಕೆ ಬಂದು ಇನ್ನು ಒಂದೇ ನಡೆ ಉಳಿದಿರುತ್ತದೆ.  ಧರ್ಮರಾಯ ಸಾಷ್ಟಾಂಗ ಶಿರಭಾಗಿ ಶ್ರೀ ಕೃಷ್ಣ ಪರಮಾತ್ಮನಿಗೆ ವಂದಿಸಿ “ಶ್ರೀ ಕೃಷ್ನಾರ್ಪಣಮಸ್ತು” ಎನ್ನುತ್ತಾನೆ.  ಧ್ರೌಪದಿಯೂ ತನ್ನ ಹಿರಿಯ ಪತಿಯ ಪಕ್ಕದಲ್ಲಿ ನಿಂತು ಪಂಚಾಂಗ ನಮಸ್ಕರಿಸುತ್ತಾಳೆ. ಕೊನೆಯ ನಡೆಗಾಗಿ ಧರ್ಮರಾಯ ಧುರ್ಯೋಧನನ ಕೈಯಿಗೆ ದಾಳಗಳನ್ನು ನೀಡುತ್ತಾನೆ.

ಈ ರೀತಿ ಮಾಡಲು ಧರ್ಮರಾಯನಿಗೆ ಹಿಂದಿನ ಅನುಭವಗಳು ಮತ್ತು ಕೃಷ್ಣನ ಲೀಲೆಯ ಪ್ರಭಾವದ ಅರಿವೇ ಕಾರಣ.

ಇಡೀ ರಾಜಸಭಾಂಗಣದ ದಿಗ್ಗಜರೆಲ್ಲಾ ನಿಬ್ಬೆರಗಾಗಿ ಕೆನ್ನೆಗಳ ಮೇಲೆ ತಮ್ಮ ಎರಡೂ ಕೈಗಳನ್ನು ಇಟ್ಟು ಕುಳಿತಿರುತ್ತಾರೆ.

ಈ ಪಗಡೆಯಾಟ ಕೌರವ ಪಾಂಡವರ ಆಂತರಿಕ ಘರ್ಷಣೆ ಅನ್ನುವುದಕ್ಕಿಂತ, ನ್ಯಾಯ ಅನ್ಯಾಯ, ಧರ್ಮ ಅಧರ್ಮಗಳ ನಡುವಿನ ನಿರ್ಣಯದ ಘೋರ ಯುದ್ಧವಾಗಿ ಪರಿಣಮಿಸಿರುತ್ತದೆ.

ಇತ್ತ ಶಕುನಿಗೆ ತನ್ನ ಮಾಯಾ ದಾಳಗಳ ಮೇಲೆ ಅಪಾರ ನಂಬಿಕೆ.

ಶಕುನಿ ಯಾರಿಗೂ ತಿಳಿಯದಂತೆ ದಾಳಗಳನ್ನು ಬದಲಾಯಿಸಿ ತನ್ನ ಮಾಯಾ ದಾಳಗಳನ್ನು ಧುರ್ಯೋಧನನ ಪರವಾಗಿ ಉರುಳಿಸುತ್ತಾನೆ. ಪಾಪ ಆತನಿಗೇನು ಗೊತ್ತು ಕೃಷ್ಣನ ಲೀಲೆ.

ಸಖದಾಶ್ಚರ್ಯ. ಶಕುನಿಗೆ ನಂಬಲಾಗುವುದಿಲ್ಲ. ಘರ ಬಡಿದವರಂತೆ ಕೂತಲ್ಲೇ  ಕುಸಿಯುತ್ತಾನೆ. ಧುರ್ಯೋಧನನ ಜಂಘಾಬಲವೇ ಉಡುಗಿ ಹೋಗುತ್ತದೆ. ತಲೆ ಸುತ್ತಿದಂತಾಗಿ  ತನ್ನ ಹಸ್ತಿನಾಪುರದ ಅರಸನಾಗುವ ಕನಸು ಹುಣಸೆಹಣ್ಣಿನ ರಭಸದ ಅಲೆಗಳಲ್ಲಿ ಕೊಚ್ಚಿಕೊಂಡು ಹೋದಂತೆ ಭಾಸವಾಗುತ್ತದೆ. ದಾಳಗಳು ಧರ್ಮರಾಯನ ವಿಜಯ ಪತಾಕೆಯ ಪರವಾಗಿ ಬೀಳುತ್ತವೆ.

ದ್ವಾರಕೆಯಲ್ಲಿ ಕೃಷ್ಣ ಮುಸುನಗುತ್ತಾ ರುಕ್ಮಿಣಿ ಭಾಮೆಯರ ಸಂಗಡ ಪಗಡೆ ಆಡುತ್ತಾ ಕುಳಿತಿರುತ್ತಾನೆ. ಆತ ಕ್ಷಣ ಮಾತ್ರದಲ್ಲಿ ಕಪಟಿಯ ಕಪಟ ದಾಳಗಳನ್ನು ತನ್ನ ಮಾಯೆಯಿಂದ ಬದಲಿಸಿರುತ್ತಾನೆ.

ರುಂಡ ಮುಂಡಗಳ ಚೆಲ್ಲಾಟವಿಲ್ಲದೆ, ರಕ್ತದೋಕುಳಿಯಿಲ್ಲದೇ, ವೀರಾಧಿ ವೀರರ ಮಡದಿಯರು ವಿಧವೆಯರಾಗದೇ, ಗಜ, ಅಶ್ವಾಧಿಗಳಿಗೆ ಕೊಂಚವೂ ನೋವಾಗದೇ, ಕುರುಕ್ಷೇತ್ರ ಕಿರುಕ್ಷೇತ್ರವಾಗಿ ಧರ್ಮ ಹಸ್ತಿನಾಪುರದ ರಾಜನಾಗಿ, ಅಧರ್ಮ ವನದಲ್ಲಿ ಒಣವಾಸ ಮಾಡುವಂತಾಗುತ್ತದೆ.

ದಾಸರು ತಂಬೂರಿ ಮೀಟುತ್ತಾ, “ಕೃಷ್ಣನ ನೆನೆದರೆ ಕಷ್ಥವೊಂದಿಷ್ಟಿಲ್ಲ” ಎಂದು ಪದ ಹೇಳುತ್ತಾ ನಿರ್ಗಮಿಸುತ್ತಾರೆ.

ಭವ್ಯರಾಗಿ ಬಾಳುವರಾಗಿ

  ಭವ್ಯರಾಗಿ ಬಾಳುವರಾಗಿ ಕರ್ತೃ: ಡಾ. ಪ್ರಭಾಕರ್ ಬೆಳವಾಡಿ ದಿವ್ಯ ಮಂತ್ರವ ಕಲಿಸುವರಾಗಿ ಭವ್ಯರಾಗಿ ಬಾಳುವರಾಗಿ I I ಪಲ್ಲವಿ I I ಯೋಗ್ಯರಾಗಿ ಭಾಗ್ಯವಂತರಾಗಿ ...